Advertisement

ಮೂವರು ಅಪಹರಣಕಾರರಿಗೆ ಗುಂಡೇಟು

01:09 AM Sep 18, 2019 | Team Udayavani |

ಬೆಂಗಳೂರು: ಮೋಟಾರು ಕಂಪನಿ ಶೋರೂಂ ಮಾಲೀಕ ಎಂ.ಸಿದ್ದರಾಜು ಅವರ ಪುತ್ರ ಹೇಮಂತ್‌ ಹಾಗೂ ಅವರ ಕಾರು ಚಾಲಕ ಕೇಶವರೆಡ್ಡಿಯನ್ನು 23 ದಿನಗಳ ಹಿಂದೆ ಅಪಹರಿಸಿ ಮೂರು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಬೆಂಗಳೂರು ಗ್ರಾಮಾಂತರ ಪೊಲೀಸರ ತಂಡ ಗುಂಡೇಟಿನ ರುಚಿ ತೋರಿಸಿದೆ.

Advertisement

ಉಲ್ಲಾಳ ಗ್ರಾಮ ಪ್ರಶಾಂತ್‌ (25) ಆತನ ಸಹಚರ ನವೀನ್‌(24) ಮತ್ತು ತಮಿಳುನಾಡಿನ ತಂಗಬಾಲು(25) ಬಂಧಿತರು. ಈ ಪೈಕಿ ಪ್ರಶಾಂತ್‌ನ ಎಡಗಾಲಿಗೆ, ನವೀನ್‌ನ ಬಲಗೈಗೆ ಹಾಗೂ ತಂಗಬಾಲನ ಎರಡು ಕಾಲುಗಳಿಗೆ ಗುಂಡೇಟು ತಗುಲಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇದೇ ವೇಳೆ ಆರೋಪಿಗಳಿಂದ ಡ್ಯಾಗರ್‌ನಿಂದ ಹಲ್ಲೆಗೊಳಗಾದ ಆನೇಕಲ್‌ ಪಿಎಸ್‌ಐ ಹೇಮಂತ್‌ ಕುಮಾರ್‌, ಕಾನ್‌ಸ್ಟೇಬಲ್‌ ಮಧುಕುಮಾರ್‌ ಹಾಗೂ ಪಿಎಸ್‌ಐ ರಾಘವೇಂದ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಅಪಹರಣಕಾರರ ವಶದಲ್ಲಿದ್ದ ಪುತ್ರ ಹೇಮಂತ್‌, ಕಾರು ಚಾಲಕ ಕೇಶವರೆಡ್ಡಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಹಾಗೆಯೇ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಯಲಹಂಕದಲ್ಲಿ ಟಿವಿಎಸ್‌ ಶೋ ರೂಂ ಹೊಂದಿರುವ ಸಿದ್ದರಾಜು ಪುತ್ರ ಹದಿನಾರು ವರ್ಷದ ಹೇಮಂತ್‌ ಸಿಂಗನಾಯಕನಹಳ್ಳಿ ಬಳಿಯ ಆರ್‌.ಟಿ.ನಗರ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಪ್ರತಿನಿತ್ಯ ಕಾರು ಚಾಲಕ ಕೇಶವರೆಡ್ಡಿ ಆತನನ್ನು ಮನೆಯಿಂದ ಕರೆದುಕೊಂಡು ಹೋಗಿ ವಾಪಸ್‌ ಕರೆತರುತ್ತಿದ್ದರು.

ಆ.26ರಂದು ಹೇಮಂತ್‌ನನ್ನು ಚಾಲಕ ಕೇಶವರೆಡ್ಡಿ ಸಂಜೆ ವಾಪಸ್‌ ಕರೆತರಲು ಹೋದಾಗ ಆರೋಪಿಗಳು ಎರಡು ತಂಡಗಳನ್ನಾಗಿ ಮಾಡಿಕೊಂಡು ಇಬ್ಬರನ್ನು ಕಾರು ಸಮೇತ ಅಪಹರಣ ಮಾಡಿ ಉಲ್ಲಾಳ ಹಾಗೂ ಗಂಗೊಂಡನಹಳ್ಳಿಯ ಬಾಡಿಗೆ ಮನೆಗಳಲ್ಲಿ ಗೃಹ ಬಂಧನದಲ್ಲಿರಿಸಿದ್ದರು.

Advertisement

ಅದರಿಂದ ಗಾಬರಿಗೊಂಡ ಸಿದ್ದರಾಜು ಕಾರು ಚಾಲಕ ಕೇಶವರೆಡ್ಡಿ ವಿರುದ್ಧ ಅನುಮಾನ ವ್ಯಕ್ತಪಡಿಸಿ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.  ಈ ಸಂಬಂಧ ಗ್ರಾಮಾಂತರ ಎಸ್ಪಿ ರವಿ ಡಿ.ಚೆನ್ನಣ್ಣನವರ್‌ ಮಾರ್ಗದರ್ಶನದಲ್ಲಿ ಹೊಸಕೋಟೆ, ದೊಡ್ಡಬಳ್ಳಾಪುರ, ಆನೇಕಲ್‌ ಉಪವಿಭಾಗದ ಡಿವೈಎಸ್‌ಪಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಆರೋಪಿಗಳಿಗೆ ಗುಂಡೇಟು: ಸುಮಾರು 40ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ 13 ದಿನಗಳಿಂದ ಆರೋಪಿಗಳ ಚಲವಲನಗಳ ಮೇಲೆ ನಿಗಾವಹಿಸಿತ್ತು. ಈ ಮಧ್ಯೆ ಆರೋಪಿಗಳು ಸೋಮವಾರ ರಾತ್ರಿ ಕರೆ ಮಾಡಿ ನಾಯಂಡಹಳ್ಳಿ, ಯಲಚೇನಹಳ್ಳಿ ಸೇರಿ 10ಕ್ಕೂ ಹೆಚ್ಚು ಸ್ಥಳಗಳನ್ನು ಬದಲಿಸಿ ಬರುವಂತೆ ಸೂಚಿಸಿದ್ದರು. ಕೊನೆಗೆ ಕನಕಪುರ ನೈಸ್‌ ರಸ್ತೆ ಜಂಕ್ಷನ್‌ ಸಮೀಪದ ತೋಪಿಗೆ ಬರುವಂತೆ ಹೇಳಿದ್ದರು.

ಹೀಗಾಗಿ ಕಾರಿನಲ್ಲಿ ಬಂದಿದ್ದ ದೂರುದಾರ ಸಿದ್ದರಾಜು ಹಣದ ಚೀಲ ಇಟ್ಟು ಹೊರಡುತ್ತಿದ್ದಂತೆ, ಅಲ್ಲೇ ಅವಿತುಕೊಂಡಿದ್ದ ಹೊಸಕೋಟೆ ಡಿವೈಎಸ್‌ಪಿ ಎನ್‌.ಬಿ.ಸಕ್ರಿ ಅವರ ತಂಡ ಆರೋಪಿ ನವೀನ್‌ನನ್ನು ಬಂಧಿಸಲು ಹೋಗಿದೆ. ಆಗ ಆತ ಡ್ಯಾಗರ್‌ನಿಂದ ಪಿಎಸ್‌ಐ ಹೇಮಂತ್‌ ಕುಮಾರ್‌ರ ತೋಳಿಗೆ ಇರಿದಿದ್ದಾನೆ.  ಈ ವೇಳೆ ಹೇಮಂತ್‌ ಕುಮಾರ್‌, ಆತ್ಮರಕ್ಷಣೆಗಾಗಿ ಆರೋಪಿಯ ಬಲಗೈಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಸ್ಥಳದಲ್ಲೇ ಆತನಿಂದ ಇತರೆ ಆರೋಪಿಗಳ ಮಾಹಿತಿ ಸಂಗ್ರಹಿಸಲಾಯಿತು.

ಈತನ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪಿಐ ಕೆ.ಪಿ.ಸತ್ಯನಾರಾಯಣ ಮತ್ತು ದೊಡ್ಡಬಳ್ಳಾಪುರ ಪಿಐ ರಾಘವೇಂದ್ರ ಇತರೆ ಆರೋಪಿಗಳ ಬಂಧನಕ್ಕೆ ಕ್ಷೀಪ್ರ ಕಾರ್ಯಾಚರಣೆ ನಡೆಸಿದರು. ಈ ವೇಳೆ ಆರೋಪಿ ಪ್ರಶಾಂತ್‌ ತನ್ನ ತಂಡದೊಂದಿಗೆ ಪರಾರಿಯಾಗಲು ಯತ್ನಿಸಿದ್ದು, ಕಡಬಗೆರೆಯ ಜನಪ್ರಿಯ ಟೌನ್‌ಶಿಪ್‌ ಮುಂಭಾಗದ ನೀಲಗಿರಿ ತೋಪಿನಲ್ಲಿ ಆರೋಪಿಗಳನ್ನು ಬೆನ್ನಟ್ಟಲಾಯಿತು.

ಆದರೆ, ಪ್ರಶಾಂತ್‌ ಅಪಹರಿಸಿದವರನ್ನು ಹತ್ಯೆಗೈಯುವುದಾಗಿ ಬೆದರಿಕೆ ಹಾಕಿದ. ಆಗ ಕಾನ್‌ಸ್ಟೇಬಲ್‌ ಮಧುಕುಮಾರ್‌ಗೆ ಆರೋಪಿ ಡ್ಯಾಗರ್‌ನಿಂದ ಬಲತೊಳಿಗೆ ಇರಿದಿದ್ದಾನೆ. ಈ ವೇಳೆ ಸಿಬ್ಬಂದಿಯ ಪ್ರಾಣ ರಕ್ಷಣೆಗಾಗಿ ಪಿಐ ಸತ್ಯನಾರಾಯಣ ಆರೋಪಿ ಪ್ರಶಾಂತ್‌ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.

ಇದೇ ವೇಳೆ ತಪ್ಪಿಸಿಕೊಂಡು ಓಡುತ್ತಿದ್ದ ತಂಗಬಾಲುನನ್ನು ಬೆನ್ನಟ್ಟಿದ ಪಿಎಸ್‌ಐ ಮುರಳೀಧರ ತೋಳಿಗೆ ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆಗ, ಪಿಎಸ್‌ಐ ಆತ್ಮರಕ್ಷಣೆಗೆ ಆರೋಪಿಯ ಎಡಗಾಲಿಗೆ ಮತ್ತು ದೊಡ್ಡಬಳ್ಳಾಪುರ ವೃತ್ತನಿರೀಕ್ಷಕ ರಾಘವೇಂದ್ರ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಹತ್ತು ದಿನಗಳ ಬಳಿಕ ಫೋನ್‌ ಕರೆ: ಅಪಹರಣ ಮಾಡಿದ ಆರೋಪಿಗಳು ಕೃತ್ಯ ಎಸಗಿ ಕೆಲ ಗಂಟೆಗಳಲ್ಲೇ ಕೇಶವರೆಡ್ಡಿ ಮೊಬೈಲ್‌ ಕಸಿದುಕೊಂಡು ಸ್ವಿಚ್‌ ಆಪ್‌ ಮಾಡಿದ್ದರು. ಉಲ್ಲಾಳ ಹಾಗೂ ಗಂಗೊಂಡನಹಳ್ಳಿಯ ಬಾಡಿಗೆ ಮನೆಯಲ್ಲಿ ಅಪಹೃತರನ್ನು ಕೂಡಿಹಾಕಿದ್ದರು. ಹತ್ತು ದಿನಗಳ ಬಳಿಕ ತಮಿಳುನಾಡು, ಆಂಧ್ರಪ್ರದೇಶದ ವಿವಿಧೆಡೆಯಿಂದ ಬಾಲಕನ ತಂದೆಗೆ ಕರೆ ಮಾಡಿ ಮೂರು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಮೊಬೈಲ್‌ ಕರೆ ಪರಿಶೀಲಿಸಿದ ಪೊಲೀಸರಿಗೆ ಕಳವು ಮಾಡಿದ ಫೋನ್‌ಗಳಿಂದ ಕರೆ ಮಾಡಿರುವುದು ಗೊತ್ತಾಗಿದೆ. ಆದರೆ, ಸುಳಿವು ಸಿಕ್ಕಿರಲಿಲ್ಲ.

ನಾಲ್ಕು ದಿನಗಳ ಹಿಂದೆ ಮತ್ತೂಮ್ಮೆ ಕರೆ ಮಾಡಿ ಎಲೆಕ್ಟ್ರಾನಿಕ್‌ ಸಿಟಿ ರಸ್ತೆಗೆ ಹಣ ತರಲು ಹೇಳಿದ್ದರು. ಆದರೆ, ಪೊಲೀಸರು ಬರುವ ಅನುಮಾನದಿಂದ ಪರಾರಿಯಾಗಿದ್ದರು. ಸೋಮವಾರ ಸಂಜೆ ಕರೆ ಮಾಡಿ, ಹಣವನ್ನು ದ್ವಿಚಕ್ರ ವಾಹನದಲ್ಲೇ ಕಳುಹಿಸುವಂತೆ ಸೂಚಿಸಿದ್ದರು. ಆದರೆ, ಮಳೆ ಬರುತ್ತಿರುವುದರಿಂದ ಕಾರಿನಲ್ಲಿ ಕಳುಹಿಸುವುದಾಗಿ ಸಿದ್ದರಾಜು ಹೇಳಿದ್ದರು.

ಕ್ರೈಂ ಸ್ಟೋರಿ, ಪುಸ್ತಕಗಳಿಂದ ಪ್ರೇರಿತನಾಗಿದ್ದ ಪ್ರಶಾಂತ್‌: ಪ್ರಕರಣದ ಮಾಸ್ಟರ್‌ ಮೈಂಡ್‌ ಪ್ರಶಾಂತ್‌ ಈ ಹಿಂದೆ ಸಂಸ್ಥೆಯೊಂದರಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ವಾಹಿನಿಗಳಲ್ಲಿ ಬರುವ ಕ್ರೈಂ ಸ್ಟೋರಿ, ಅದಕ್ಕೆ ಸಂಬಂಧಿಸಿದ ಪುಸ್ತಕಗಳು, ಯುಟ್ಯೂಬ್‌ನಲ್ಲಿ ಅಪಹರಣದ ದೃಶ್ಯಗಳನ್ನು ನೋಡುತ್ತಿದ್ದ. ಹೀಗಾಗಿ ತಮಿಳುನಾಡಿನ ವೆಲ್ಲಾಪುರಿ ಗ್ಯಾಂಗ್‌ನ ತನ್ನ ಸಹಚರರ ಜತೆ ಸೇರಿಕೊಂಡು 2014ರಲ್ಲಿ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಜೈಕಿರಣ್‌ ಎಂಬಾತನನ್ನು ಅಪಹರಿಸಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದ.

ಬಳಿಕ ಮತ್ತೂಂದು ಅಪಹರಣಕ್ಕೆ ಸಿದ್ಧನಾಗಿದ್ದ. ಈ ಮಧ್ಯೆ ದೂರುದಾರ ಸಿದ್ದರಾಜು ಅವರ ಶೋರೂಂನಲ್ಲಿ ಕೆಲಸ ಮಾಡುವ ಸ್ನೇಹಿತನೊಬ್ಬನ ಮೂಲಕ ಸಿದ್ದರಾಜು ಹಾಗೂ ಅವರ ಪುತ್ರರ ಬಗ್ಗೆ ಮಾಹಿತಿ ಪಡೆದು ಎರಡು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದ. ಆರೋಪಿ ಅಪಹರಣ ಮಾಡುವ ವೇಳೆ ಮೊಬೈಲ್‌ ಬಳಸಿಲ್ಲ. ಅಲ್ಲದೆ, ಕಳವು ಮಾಡಿದ ಕಾರು ಮತ್ತು ಬೈಕ್‌ ಬಳಸಿದ್ದ ಎಂದು ಪೊಲೀಸರು ಹೇಳಿದರು.

300 ಮೀ. ನೆಲದ ಮೇಲೆ ತೆವಳಿಹೋದ ಪೊಲೀಸರು!: ಅಪಹರಣಕಾರರನ್ನು ಬಂಧಿಸಲು ಹೋದ ಪೊಲೀಸರು ಸುಮಾರು 300 ಮೀಟರ್‌ಗಳಷ್ಟು ದೂರ ಕ್ರೌಲಿಂಗ್‌(ನೆಲದ ಮೇಲೆ ತೆವಳುವುದು) ಮಾಡಿದ್ದಾರೆ. ಆರೋಪಿಗಳ ಸೂಚನೆಯಂತೆ ಸಿದ್ದರಾಜು ನಸುಕಿನ 4 ಗಂಟೆ ಸುಮಾರಿಗೆ ಕಾರಿನಲ್ಲಿ ಹಣ ಕೊಂಡೊಯ್ಯುವಾಗ ಅದೇ ಕಾರಿನ ಹಿಂಬದಿ ಮೂವರು ಇನ್‌ಸ್ಪೆಕ್ಟರ್‌ಗಳು ಮಲಗಿದ್ದರು.

ಅಲ್ಲದೆ, ಇನ್ನು ಕೆಲ ಸಿಬ್ಬಂದಿ ಮಫ್ತಿಯಲ್ಲಿ ನಿಗದಿತ ಸ್ಥಳದ ಸಮೀಪದಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಮಲಗಿದ್ದರು. ಕೆಲ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿದ ನವೀನ್‌, ಹಣದ ಚೀಲ ಸ್ಥಳದಲ್ಲಿಟ್ಟು ಹೊರಡುವಂತೆ ಸಿದ್ದರಾಜುಗೆ ಸೂಚಿಸಿದ್ದಾನೆ. ಸುಮಾರು 300 ಮೀಟರ್‌ ದೂರದಲ್ಲಿ ಕಾರು ಚಾಲನೆ ಇರುವಾಗಲೇ ಮೂವರು ಇನ್‌ಸ್ಪೆಕ್ಟರ್‌ಗಳು ಕಾರಿನಿಂದ ಜಿಗಿದಿದ್ದಾರೆ.

ನಂತರ ಕ್ರೌಲಿಂಗ್‌ ಮಾಡಿಕೊಂಡು ಹಣದ ಚೀಲ ಇಟ್ಟಿದ್ದ ಸಮೀಪದ ಬಂದಿದ್ದು, ಇತರೆ ಸಿಬ್ಬಂದಿಗೂ ಕ್ರೌಲಿಂಗ್‌ ಮಾಡಿಕೊಂಡು ಬರುವಂತೆ ಸೂಚಿಸಿದ್ದಾರೆ. ಅನಂತರ ಅತ್ತಿತ್ತ ನೋಡುತ್ತ ಹಣದ ಚೀಲ ಕೊಂಡೊಯ್ಯಲು ಬಂದ ನವೀನ್‌ನನ್ನು ಹಿಡಯಲು ಮಂದಾದಾಗ, ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ಹೀಗಾಗಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next