Advertisement

ಈವರೆಗೆ ಪತ್ತೆಯಾದದ್ದು ಮೂರು ಕೆಎಫ್‌ಡಿ ಪ್ರಕರಣ; ಹಾಲಪ್ಪ ಎಚ್ಚರಿಕೆ

08:21 PM Apr 22, 2022 | Vishnudas Patil |

ಸಾಗರ: ತಾಲೂಕಿನಲ್ಲಿ 738 ರಕ್ತದ ಮಾದರಿ ಪರೀಕ್ಷೆಯಲ್ಲಿ ಮೂವರಿಗೆ ಮಂಗನ ಕಾಯಿಲೆ ಕಂಡುಬಂದಿತ್ತು. ತಡಗಳಲೆ, ಕಾರ್ಗಲ್ ಮತ್ತು ಕಾಗೋಡು ಪ್ರದೇಶದಲ್ಲಿ ಇದು ಕಂಡುಬಂದಿದ್ದು ಈಗ ಅವರು ಗುಣಮುಖರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಜನತೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಸೂಚಿಸಿದರು.

Advertisement

ಶುಕ್ರವಾರ ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಂಗನ ಕಾಯಿಲೆ ಮುಂಜಾಗ್ರತೆ ಕುರಿತಂತೆ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಜನವರಿ ತಿಂಗಳಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ 738 ರಕ್ತ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಕಾಣಿಸಿಕೊಳ್ಳುವ ಸಂಭವ ಹೆಚ್ಚಿದ್ದು, ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಇತ್ತೀಚೆಗೆ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಮಂಗನ ಕಾಯಿಲೆಯಿಂದ ಓರ್ವರು ಮೃತಪಟ್ಟಿದ್ದಾರೆ. ನಾವು ತುಂಬಾ ಎಚ್ಚರ ವಹಿಸಬೇಕು. ಆರೋಗ್ಯ ಇಲಾಖೆ ಕರಪತ್ರಗಳನ್ನು ಮುದ್ರಿಸಿ ಆ ಪ್ರದೇಶದ ಮನೆ ಮನೆಗೆ ತಲುಪಿಸಬೇಕು. ಸಾಗರ ತಾಪಂ ಈ ಕೆಲಸದಲ್ಲಿ ಕೈ ಜೋಡಿಸಬೇಕು ಎಂದರು.

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಮೇಳ ಏ. 28ರಂದು ಸಾಗರದಲ್ಲಿ ನಡೆಯಲಿದ್ದು ಒಂದು ಸಾವಿರಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅಂದು ಕೈಬಿಟ್ಟು ಹೋದವರಿಗೆ ಆಯುಷ್ಮಾನ್ ಕಾರ್ಡ್ ಅನ್ನು ಕೂಡ ನೀಡಲಾಗುವುದು. ಸಮಸ್ಯೆ ಇರುವವರಿಗೆ ವೈದ್ಯರ ಶುಶ್ರೂಷೆಗೆ ಶಿಫಾರಸು ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳು ನಡೆದಿವೆ ಎಂದರು.

ಜಿಲ್ಲೆಯಲ್ಲಿನ ಕೆಎಫ್‌ಡಿ ಕುರಿತಂತೆ ವಿವರಣೆ ನೀಡಿದ ಲ್ಯಾಬೊರೇಟರಿ ಮುಖ್ಯಸ್ಥೆ ಪಲ್ಲವಿ, ಜಿಲ್ಲೆಯಲ್ಲಿ ೫೪ ಉಣ್ಣೆಗಳ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ೨ರಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ ಗುಣಲಕ್ಷಣಗಳು ಕಂಡುಬಂದಿತ್ತು. ಲಸಿಕೆಯ ಬೂಸ್ಟರ್ ಡೋಸ್ ಅನ್ನು 4,400 ಜನರಿಗೆ ಕೊಡಲಾಗುತ್ತಿದ್ದು ಕೆಲವು ಗುಡ್ಡಗಾಡಿನಂತಹ ಪ್ರದೇಶಗಳಲ್ಲಿ ಇನ್ನೂ ಕೊಡಬೇಕಾಗಿದೆ. ಅವರಿಗೆ ಸಂಚಾರಕ್ಕೆ ವಾಹನ ಕೊರತೆ ಇದ್ದು ಅದನ್ನು ಸಂಬಂಧಪಟ್ಟ ಇಲಾಖೆ ನಿರ್ವಹಿಸಬೇಕು. ಆ ಸಂದರ್ಭದಲ್ಲಿ ಅಂತಹ ಪ್ರದೇಶಗಳಿಗೆ ತೆರಳುವಂತಹ ವೈದ್ಯರ ತಂಡ ಎಲ್ಲಾ ರೀತಿಯ ತಪಾಸಣೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಸಭೆಯಲ್ಲಿ ಸಹಾಯಕ ಆಯುಕ್ತ ಡಾ. ಎಲ್. ನಾಗರಾಜ್, ತಹಶೀಲ್ದಾರ್ ಮಲ್ಲೇಶ ಬೀರಪ್ಪ ಪೂಜಾರ, ತಾಪಂ ಕಾರ್ಯನಿರ್ವಹಣಾಧಿಕಾರಿ ಪುಷ್ಪ್ಪಾ ಆರ್. ಕಮ್ಮಾರ್, ವಲಯ ಅರಣ್ಯಾಧಿಕಾರಿ ಪ್ರಮೋದ್, ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಪರಪ್ಪ, ತಾಲೂಕು ವೈದ್ಯಾಧಿಕಾರಿ ಡಾ| ಮೋಹನ್, ನಗರಸಭಾಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಗಣೇಶ್‌ಪ್ರಸಾದ್, ಸಂತೋಷ್ ಶೇಟ್, ಸತೀಶ್ ಮೊಗವೀರ್ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next