ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಹಲವು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ (ಜೂನ್ 20) ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಿಮಗೆ ಅಗ್ನಿಪಥ ಯೋಜನೆ ಇಷ್ಟವಿಲ್ಲದಿದ್ದರೆ ಸೇನೆಗೆ ಸೇರಬೇಡಿ, ಬಲವಂತವಿಲ್ಲ: ವಿ.ಕೆ.ಸಿಂಗ್
ಡೌನ್ ಟೌನ್ ಜುನೆಟಿಂತ್ ಆಚರಣೆಯ ಮೋಚೆಲ್ಲಾ ಕಾರ್ಯಕ್ರಮದ ಸಮೀಪದ ಸ್ಥಳದಲ್ಲಿ ಈ ಶೂಟೌಟ್ ಘಟನೆ ನಡೆದಿದೆ. ಅಮೆರಿಕದಲ್ಲಿ ಗನ್ ಹಿಂಸಾಚಾರ ಹೆಚ್ಚಳವಾಗುತ್ತಿರುವ ಬಗ್ಗೆ ಅಧ್ಯಕ್ಷ ಜೋ ಬೈಡೆನ್ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮಕ್ಕಳು ಮತ್ತು ಕುಟುಂಬ ಸದಸ್ಯರನ್ನು ರಕ್ಷಿಸುವ ನಿಟ್ಟಿನಲ್ಲಿ ಅಪಾಯಕಾರಿ ಶಸ್ತ್ರಾಸ್ತ್ರವನ್ನು ನಿಷೇಧಿಸುವ ಅಗತ್ಯವಿದೆ. ಇಲ್ಲದೇ ಗನ್ ಖರೀದಿಸುವ ವಯೋಮಿತಿಯನ್ನು 18ರಿಂದ 21ಕ್ಕೆ ಏರಿಕೆ ಮಾಡಬೇಕಾದ ಅಗತ್ಯವಿದೆ ಎಂದು ಬೈಡೆನ್ ತಿಳಿಸಿದ್ದಾರೆ.
ಹೆಚ್ಚಿನ ಸಾಮರ್ಥ್ಯದ ಮ್ಯಾಗಝೈನ್ಸ್ ಗಳನ್ನು ನಿಷೇಧಿಸಬೇಕಾಗಿದೆ. ಗನ್ ಖರೀದಿಸುವವರ ಪೂರ್ವಾಪರ ಪರಿಶೀಲನೆ ನಿಯಮ ಕಠಿಣಗೊಳಿಸಬೇಕು. ಬಂದೂಕು ತಯಾರಕರು ಹೊಣೆಗಾರಿಕೆಯ ವಿನಾಯ್ತಿಯನ್ನು ರದ್ದುಗೊಳಿಸಬೇಕಾಗಿದೆ ಎಂದು ಬೈಡೆನ್ ಹೇಳಿದ್ದಾರೆ.
ಕಳೆದ ತಿಂಗಳು ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 19 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಳಿಕ ಹಲವಾರು ಗುಂಡಿನ ದಾಳಿ ಪ್ರಕರಣ ನಡೆದಿದ್ದು, ಹಲವು ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು.