Advertisement

ತಬ್ಲೀಘಿ ಜಮಾತ್‌ನಲ್ಲಿ ಜಿಲ್ಲೆಯ ಮೂವರು

06:29 PM Apr 03, 2020 | Suhan S |

ಚಿತ್ರದುರ್ಗ: ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್‌ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೂರು ಜನ ಭಾಗವಹಿಸಿದ್ದು ಇಬ್ಬರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

Advertisement

ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೂವರ ಪೈಕಿ ಒಬ್ಬರು ದೆಹಲಿಯಲ್ಲಿಯೇ ಕ್ವಾರಂಟೈನ್‌ ಆಗಿದ್ದಾರೆ. ಇನ್ನಿಬ್ಬರನ್ನು ಜಿಲ್ಲೆಯ ಆರೋಗ್ಯ ಇಲಾಖೆಯಿಂದ ಕ್ವಾರಂಟೈನ್‌ ಮಾಡಲಾಗಿದೆ ಎಂದರು.

ದೆಹಲಿಯಲ್ಲಿ ಕ್ವಾರಂಟೈನ್‌ ಆಗಿರುವ ವ್ಯಕ್ತಿ ರೈಲ್ವೆ ಇಲಾಖೆಯ ನೌಕರರಾಗಿದ್ದಾರೆ. ಜಿಲ್ಲೆಯಲ್ಲಿ ಕ್ವಾರಂಟೈನ್‌ ಆಗಿರುವ ಇಬ್ಬರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸದ್ಯ ಯಾವುದೇ ರೋಗ ಲಕ್ಷಣಗಳಿಲ್ಲ. ಇದೇ ರೀತಿ ದೆಹಲಿಗೆ ಹೋಗಿ ಬಂದವರು ಯಾರಾದರೂ ಇದ್ದರೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಲು ಮನವಿ ಮಾಡಿದರು.

ಹಿರಿಯೂರಿನಲ್ಲಿ 8 ಜನ ಕತಾರ್‌, ಮುಂಬೈ ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದು, ಸೋಂಕು ಪೀಡಿತ ದೇಶದಿಂದ ಬಂದ ಕಾರಣ ಕ್ವಾರಂಟೈನ್‌ ಮಾಡಲಾಗಿದೆ. ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಆದರೆ ರೋಗ ಲಕ್ಷಣಗಳಿಲ್ಲ ಎಂದು ಮಾಹಿತಿ ನೀಡಿದರು.

ಚಳ್ಳಕೆರೆ ತಾಲೂಕಿನಲ್ಲಿ 11 ಜನರು ಅಜ್ಮಿರ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಸೂರತ್‌ ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅವರನ್ನೂ ಸಹ ಕ್ವಾರಂಟೈನ್‌ ಮಾಡಲಾಗಿದೆ ಎಂದರು.

Advertisement

ಹೊರಗಿನಿಂದ ಬಂದವರು 24 ಸಾವಿರ ಜನ: ಆರಂಭದಲ್ಲಿ ವಿದೇಶಗಳಿಂದ ಬಂದವರ ಮೇಲೆ ಹೆಚ್ಚು ನಿಗಾ ವಹಿಸಿದ ಸರ್ಕಾರ, ನಂತರ ದೆಹಲಿಯಿಂದ ಬಂದವರ ಬಗ್ಗೆ ಹೆಚ್ಚು ಕಾಳಜಿ ವಹಿಸಿತ್ತು. ಈಗ ಚಿತ್ರದುರ್ಗ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಜಿಲ್ಲೆಗೆ ಬೆಂಗಳೂರು ಮತ್ತಿತರೆ ಹೊರ ಜಿಲ್ಲೆಗಳು ಹಾಗೂ ಇತರೆ ರಾಜ್ಯಗಳಿಂದ ಬಂದವರ ಮೇಲೆ ನಿಗಾ ವಹಿಸುತ್ತಿದೆ. ಇದರ ಭಾಗವಾಗಿ ಬೆಂಗಳೂರು ಮತ್ತಿತರೆಡೆಗಳಿಂದ ಬಂದಿರುವ ಸುಮಾರು 24 ಸಾವಿರ ಜನರನ್ನು ಗುರುತಿಸಿದ್ದು, ರೋಗ ಲಕ್ಷಣ ಕಂಡು ಬಂದಲ್ಲಿ ಕ್ವಾರಂಟೈನ್‌ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸದ್ಯ ಜಿಲ್ಲೆಯಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ. ಮುಂಜಾಗ್ರತೆಯೇ ಈ ರೋಗ ತಡೆಗೆ ಪರಿಹಾರವಾಗಿದ್ದು, ಇದರ ಬಗ್ಗೆಯೇ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next