Advertisement

“ಸ್ವತ್ಛ  ವಿಧಾನ ಸಭಾ ಕ್ಷೇತ್ರಕ್ಕೆ ಮುನ್ನೂರು ಮುನ್ನುಡಿ’ 

02:55 PM Apr 28, 2017 | |

ಮುನ್ನೂರು: ಸರಕಾರದಿಂದ  ಹಣ ಬಿಡುಗಡೆಯಾದರೂ ತ್ಯಾಜ್ಯ ವಿಲೇವಾರಿ ನಡೆಸದೆ ಪಂಚಾಯತ್‌ ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ತುರವೇ ವತಿಯಿಂದ  “ಸ್ವತ್ಛ ಮಂಗಳೂರು ವಿಧಾನ ಸಭಾ ಕ್ಷೇತ್ರ’ ಹೋರಾಟಕ್ಕೆ ಮುನ್ನೂರು ಮುನ್ನುಡಿ ಬರೆಯಲಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಿರಾಜ್‌ ಅಡ್ಕರೆ ಹೇಳಿದ್ದಾರೆ.

Advertisement

ಅವರು ತುಳುನಾಡು ರಕ್ಷಣಾ ವೇದಿಕೆ ಮುನ್ನೂರು ಗ್ರಾಮ ಪಂಚಾಯತ್‌ ಎದುರುಗಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ಮಾತನಾಡಿದರು. ಮುನ್ನೂರು ಗ್ರಾಮ ಪಂಚಾಯತ್‌ ತ್ಯಾಜ್ಯಕ್ಕೆ ಸಂಬಂಧಿಸಿ ರೂ. 28 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ  ಅದರ ಉಪಯೋಗವಾಗಿಲ್ಲ.  ಶ್ರೀಮಂತರಲ್ಲಿ ಬಿಪಿಎಲ್‌ ಕಾರ್ಡಿದೆ; ಆದರೆ  ಬಡವರು ಅದಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಪಂಚಾಯತ್‌ಗೆ  ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದಿಸದ ಕಾರಣ ಹೋರಾಟ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕಾದೀತು ಎಂದು ಎಚ್ಚರಿಸಿದರು.

ತುರವೇ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಭಟ್‌ ಕಡಬ ಮಾತನಾಡಿ, ಮುನ್ನೂರು ಪಂಚಾಯತ್‌ ವ್ಯಾಪ್ತಿಯ ಕುತ್ತಾರ್‌ ಜಂಕ್ಷನ್‌ ಅಭಿವೃದ್ಧಿಯಾಗುತ್ತಿದ್ದು, ಮನೆಗಳ ತ್ಯಾಜ್ಯ ಸಂಗ್ರಹಿಸದ ಕಾರಣ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಮದನಿನಗರ ಮಸೀದಿ  ಬಳಿ ಮಳೆನೀರು ರಸ್ತೆಯಲ್ಲಿಯೇ ಹರಿದು  ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕುತ್ತಾರು ಸರಕಾರಿ ಶಾಲೆಯ ಆವರಣದಲ್ಲಿಯೂ ಮಳೆ ನೀರಿನ ಸಮಸ್ಯೆ ಗಂಭೀರವಾಗುವ ಅಪಾಯವಿದೆ. ಇನ್ನೊಂದೆಡೆ ಸ್ಥಳೀಯ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳ ಕೊಳಚೆ ನೀರು ಇದೇ ಶಾಲೆಯ ಆವರಣದಲ್ಲಿ ಹರಿದಾಡಿ ಮಕ್ಕಳಲ್ಲಿ ಅನಾರೋಗ್ಯ ಸೃಷ್ಟಿಸುವ ಭೀತಿಯಿದೆ. ಕುತ್ತಾರು ಜಂಕ್ಷನ್ನಿನಲ್ಲಿ   ಖಾಸಗಿ ವಾಹನಗಳು ಎಲ್ಲೆಂದರಲ್ಲಿ ಪಾರ್ಕಿಂಗ್‌ ನಡೆಸುತ್ತಿದ್ದರೆ,  ರಿಕ್ಷಾ ಪಾರ್ಕಿಂಗ್‌ಗೂ ಸರಿಯಾದ  ಜಾಗವಿಲ್ಲ  ಎಂದರು.

ಟೆಂಡರ್‌ ಸಿದ್ಧವಾಗಿದೆ: ಪಿಡಿಒ
ಪ್ರತಿಭಟನಕಾರರ ಮನವಿಯನ್ನು ಸ್ವೀಕರಿಸಿದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ  ಸುಧೀರ್‌ ಮಾತನಾಡಿ,  ತ್ಯಾಜ್ಯ ವಿಲೇವಾರಿಗೆ ಮೂರು ಟೆಂಡರ್‌ ಕರೆಯಲಾಗಿತ್ತು. ಅದರಲ್ಲಿ ಎರಡು ರದ್ದುಗೊಂಡು ವಿಳಂಬಾಗಿದ್ದು,  ಈಗ 3ನೇ ಟೆಂಡರ್‌ ಸರಿಯಾಗಿದೆ. ಸಮಸ್ಯೆಗಳ ಕುರಿತು ನಡೆಯುವ ಸಭೆಗಳಲ್ಲಿ ಚರ್ಚೆಗಳೇ ನಡೆದು ಉಪಯೋಗಕ್ಕೆ ಬರುತ್ತಿಲ್ಲ.  ವಾರ್ಡು ಸಭೆಗಳಲ್ಲಿ ವೀಡಿಯೋ ಪ್ರದರ್ಶನ ಮಾಡುವ ಮೂಲಕ  ತ್ಯಾಜ್ಯದ ಕುರಿತು ಮನೆಮಂದಿಗೆ ಜಾಗೃತಿ ಮೂಡಿಸಲಾಗಿದೆ. ಆದರೆ ಜನರು ಸ್ಪಂದಿಸದ ಕಾರಣ ಸಮಸ್ಯೆ ಉದ್ಭವಿಸಿದೆ. ಮುಂದಿನ ತಿಂಗಳ ಒಳಗೆ ಸಮರ್ಪಕವಾಗಿ ವಿಲೇವಾರಿ ಮಾಡಲಾಗುವುದು ಎಂದರು. ರಹೀಂ ಕುತ್ತಾರ್‌,  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿಕಾ ಜೈನ್‌,  ವಿದ್ಯಾ ಯು.ಜೋಗಿ,  ರಾಜೇಶ್‌ ಕುತ್ತಾರ್‌, ಅರುಣ್‌ ಡಿ’ಸೋಜಾ, ಲಿಯೋ ಡಿ’ಸೋಜಾ,  ಆನಂದ್‌ ಅಮೀನ್‌ ಅಡ್ಯಾರ್‌,  ಜಗದೀಶ್‌, ಜಮಾಲ್‌ ಮೊದಲಾದವರು ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next