Advertisement

ಭಾರತದ ವನಿತೆಯರಿಗೆ ಮೂರು ಬಂಗಾರ

10:11 AM Feb 22, 2020 | sudhir |

ಹೊಸದಿಲ್ಲಿ: ಏಶ್ಯ ಕುಸ್ತಿ ಕೂಟದಲ್ಲಿ ಗುರುವಾರ ಭಾರತದ ವನಿತೆಯರು ಮೂರು ಬಂಗಾರದೊಂದಿಗೆ ಹೊಳೆದರು. ದಿವ್ಯಾ ಕಾಕ್ರನ್‌, ಸರಿತಾ ಮೋರ್‌ ಮತ್ತು ಪಿಂಕಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದರೆ, ನಿರ್ಮಲಾದೇವಿ ಬೆಳ್ಳಿ ಗೆದ್ದರು.

Advertisement

ದಿವ್ಯಾ ಕಾಕ್ರನ್‌ ವನಿತೆಯರ 68 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿ ವನಿತೆಯರ ಪದಕ ಬೇಟೆಗೆ ನಾಂದಿ ಹಾಡಿದರು. ಇದರೊಂದಿಗೆ ಅವರು ಏಶ್ಯ ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಕೇವಲ ಎರಡನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. 2018ರಲ್ಲಿ ನವಜೋತ್‌ ಕೌರ್‌ 65 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಅನಂತರ 50 ಕೆ.ಜಿ. ವಿಭಾಗದಲ್ಲಿ ಪರಾಭವಗೊಂಡ ನಿರ್ಮಲಾದೇವಿ ಬೆಳ್ಳಿಗೆ ಸಮಾಧಾನಪಟ್ಟರು.

58 ಕೆ.ಜಿ. ವಿಭಾಗದಲ್ಲಿ ಸರಿತಾ ಮೋರ್‌, 55 ಕೆ.ಜಿ. ವಿಭಾಗದಲ್ಲಿ ಪಿಂಕಿ ಕೂಡ ಬಂಗಾರವನ್ನು ಕೊರಳಿಗೆ ಅಲಂಕರಿಸಿಕೊಂಡರು.

ದಿವ್ಯಾ ಅಜೇಯ ಓಟ
ರೌಂಡ್‌ ರಾಬಿನ್‌ ಮಾದರಿಯಲ್ಲಿ ಸ್ಪರ್ಧೆಗಳು ನಡೆದವು. ದಿವ್ಯಾ ಎಲ್ಲ 4 ಪಂದ್ಯಗಳಲ್ಲಿ ಗೆದ್ದರು. ಮೊದಲ ಪಂದ್ಯದಲ್ಲಿ ಕಜಾಕ್‌ಸ್ಥಾನದ ಅಲ್ಬಿನ ಕೈರ್ಗೆಲಿನೋವಾ ವಿರುದ್ಧ, ಅನಂತರ ಮಂಗೋಲಿಯದ ಡೆಲ್ಗೆರ್ಮ ಎನ್‌Rಸೈಖಾನ್‌ ವಿರುದ್ಧ ಗೆದ್ದರು. 3ನೇ ಸುತ್ತಿನಲ್ಲಿ ಉಜ್ಬೆಕಿಸ್ಥಾನದ ಅಜೊದಾ ಎಸ್ಬೆರ್ಗೆಮೋವಾ ವಿರುದ್ಧ ಸುಲಭದಲ್ಲೇ ಮೇಲುಗೈ ಸಾಧಿಸಿದರು.

ಜಪಾನಿನ ಜೂನಿಯರ್‌ ವಿಶ್ವ ಚಾಂಪಿಯನ್‌ ನರುಹ ಮಟ್ಸುಯುಕಿ ವಿರುದ್ಧ ಮಾತ್ರ ತೀವ್ರ ಹೋರಾಟ ನಡೆಸಬೇಕಾಯಿತು. ಆರಂಭದಲ್ಲಿ ದಿವ್ಯಾ 4-0 ಮುನ್ನಡೆಯಲ್ಲಿದ್ದರು. ಇದನ್ನು ಜಪಾನಿ ಕುಸ್ತಿಪಟು ಸರಿಗಟ್ಟಿದರು.

Advertisement

ಮಟ್ಸುಯುಕಿ ಭಾರತೀಯಳನ್ನು ಮಣಿಸಿಯೇ ಬಿಟ್ಟರು ಎಂಬ ಹಂತದಲ್ಲಿ ದಿವ್ಯಾ ತಿರುಗಿಬಿದ್ದರು. ಈ ವೇಳೆ ದಿವ್ಯಾ ಮಾಡಿದ ಎಡವಟ್ಟು ಅವರಿಗೆ ಮುಳುವಾಗುವ ಸಾಧ್ಯತೆ ಇತ್ತು. ರೆಫ್ರಿ ಫ‌ಲಿತಾಂಶ ಘೋಷಿಸುವ ಮುನ್ನವೇ ದಿವ್ಯಾ ಮ್ಯಾಟ್‌ನಿಂದ ಹೊರಹಾರಿ ಸಂಭ್ರಮಿಸಿದರು. ನಿಯಮಗಳ ಪ್ರಕಾರ ಇದು ತಪ್ಪಾದರೂ, ಕಡೆಗೂ ದಿವ್ಯಾರನ್ನೇ ವಿಜೇತೆ ಎಂದು ಘೋಷಿಸಲಾಯಿತು.

ಪಿಂಕಿ, ಸರಿತಾ ಸ್ವರ್ಣ ಸಂಭ್ರಮ
ಪಿಂಕಿ 55 ಕೆಜಿ ಫೈನಲ್‌ನಲ್ಲಿ ಮಂಗೋಲಿ ಯಾದ ಡುಲ್ಗುನ್‌ ಮೊಲೋರ್ಮಾ ವಿರುದ್ಧ 2-1 ಅಂತರದ ಗೆಲುವು ಒಲಿಸಿಕೊಂಡರು. ಬಳಿಕ 59 ಕೆಜಿ ಫೈನಲ್‌ನಲ್ಲಿ ಸರಿತಾ ಮೋರ್‌ ಮಂಗೋಲಿಯಾದ ಬಟೆÕಸೆಗ್‌ ಅಟ್ಲಾಂಟ್‌ಸೆಗ್‌ ವಿರುದ್ಧ 3-2 ಅಂತರದ ಮೇಲುಗೈ ಸಾಧಿಸಿದರು.

ಫೈನಲ್‌ನಲ್ಲಿ ಸೋತ ನಿರ್ಮಲಾ
50 ಕೆ.ಜಿ. ವಿಭಾಗದಲ್ಲಿ ಫೈನಲ್‌ ತಲುಪಿದ್ದ ನಿರ್ಮಲಾದೇವಿ, ಅಲ್ಲಿ ಜಪಾನಿನ ಮಿಹೊ ಇಗರಾಶಿ ವಿರುದ್ಧ ದಿಟ್ಟ ಹೋರಾಟ ನಡೆಸಿಯೂ ಕೇವಲ 2-3 ಅಂಕಗಳಿಂದ ಸೋಲು ಕಾಣಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next