ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ಉತ್ಪನ್ನ ತಯಾರಕ ಸಂಸ್ಥೆ ಎಲ್‌ಜಿ ತಾನು ಅಭಿವೃದ್ಧಿ ಪಡಿಸುತ್ತಿರುವ ಹೊಸ ಸ್ಮಾರ್ಟ್‌ಫೋನ್‌ನ ವಿನ್ಯಾಸದ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿತ್ತು. ಅದೀಗ ಸ್ವೀಕೃತಗೊಂಡು ಸ್ಮಾರ್ಟ್‌ಫೋನ್ ತಂತ್ರಜ್ಞಾನ ಜಗತ್ತಿನಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ. ಏಕೆಂದರೆ ಎಲ್‌ಜಿ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಈ ಫೋನು ತ್ರೀಫೋಲ್ಡ್ ಆಗಿರುತ್ತದೆ.
ತ್ರೀಫೋಲ್ಡ್ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಳ್ಳೆಯ ಉದಾರಣೆ, ಕೊಡೆ. ಅಜ್ಜನ ಕಾಲದ ಉದ್ದದ ಕೊಡೆಯನ್ನು ನೀವೆಲ್ಲರೂ ನೋಡಿರುತ್ತೀರಾ, ಬಳಸಿಯೂ ಇರುತ್ತೀರಾ. ಅದನ್ನು ಎಲ್ಲಾ ಕಡೆ ಹೊತ್ತೂಯ್ಯುವುದು ಕಷ್ಟವೆಂಬ ಕಾರಣಕ್ಕೆ ಟೂ ಫೋಲ್ಡ್ ಕೊಡೆಗಳ ಆವಿಷ್ಕಾರವಾದವು. ನಂತರ ಕೊಡೆಯನ್ನು ಇನ್ನಷ್ಟು ಚಿಕ್ಕದಾಗಿಸಲು, ಜೇಬಿನಲ್ಲಿ ಕೊಂಡೊಯ್ಯುವಂತೆ ಮಾಡುವ ಸಲುವಾಗಿ ತ್ರೀಫೋಲ್ಡ್ ಕೊಡೆಗಳ ಆವಿಷ್ಕಾರವಾದವು. ಇದೀಗ ಸ್ಮಾರ್ಟ್‌ಫೋನ್ ಕೂಡಾ ಕೊಡೆಯ ಹಾದಿಯಲ್ಲಿ ಸಾಗುತ್ತಿರುವುದು ಅಚ್ಚರಿಯ ಬೆಳವಣಿಗೆ.
ಆ ಹಿಂದೆ ಸ್ಯಾಮ್‌ಸಂಗ್, ಶಿಯೋಮಿ ಕೂಡಾ ತ್ರೀಫೋಲ್ಡ್ ಫೋನುಗಳನ್ನು ಹೊರತರುವ ಬಗ್ಗೆ ಸುದ್ದಿ ಕೇಳಿಬಂದಿತ್ತು. ಇದೀಗ ಎಲ್‌ಜಿ ಸರದಿ. ಮೂರು ಬಾರಿ ಮಡಚಬಲ್ಲ ಸ್ಮಾರ್ಟ್ ಫೋನು ನೋಡಲು ಹೇಗಿರುತ್ತದೆ ಎಂಬ ಯೋಚನೆ ಮೊದಲಿಗೆ ಬರುವುದು ಸಹಜ. ಈ ಫೋನು ಇಂಗ್ಲಿಷ್‌ನ ಆಕಾರದಲ್ಲಿ ಮಡಚಿಕೊಳ್ಳುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಬ್ರೋಚರ್‌ಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಮೂರು ಮಡಿಕೆಯ ಬ್ರೋಚರ್ ಅನ್ನು ಹೇಗೆ ಬಿಡಿಸಿ ಓದುತ್ತೇವೆಯೋ ಅದೇ ರೀತಿ ಈ ಹೊಸ ಫೋನು ತೆರೆದುಕೊಳ್ಳಲಿದೆ.
ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಎರಡು ಸಿಮ್ ಸ್ಲಾಟುಗಳು, ಎರಡು ಕ್ಯಾಮೆರಾಗಳು, ಎರಡು ಲೆನ್ಸ್‌ಗಳು ಹೀಗೆ ಸವಲತ್ತುಗಳನ್ನು ದುಪ್ಪಟ್ಟುಗೊಳಿಸುವ ಟ್ರೆಂಡ್‌ಅನ್ನು ಗಮನಿಸಬಹುದು. ಅಭಿವೃದ್ದಿಗೊಳ್ಳಲಿರುವ ಈ ಫೋನಿನಲ್ಲಿ ಎರಡು ಸ್ಕ್ರೀನ್‌ಗಳು ಇರಲಿವೆ. ಒಂದು ಸ್ಕ್ರೀನ್ ಮಾರುಕಟ್ಟೆಯಲ್ಲಿರುವ ಮಿಕ್ಕ ಸ್ಮಾರ್ಟ್‌ಫೋನುಗಳ ಸ್ಕ್ರೀನ್‌ನಷ್ಟೇ ಗಾತ್ರವನ್ನು ಹೊಂದಿದ್ದರೆ, ಎರಡನೇ ಸ್ಕ್ರೀನ್ ಅದರ ಎರಡರಷ್ಟು ಗಾತ್ರವನ್ನು ಹೊಂದಲಿದೆ. ಯಾವ ಯಾವ ಸವಲತ್ತುಗಳನ್ನು ಸಂಸ್ಥೆ ಕೊಡಲಿದೆ, ಸ್ಕ್ರೀನ್‌ಗಳು ಹೇಗೆ ಕೆಲಸ ಮಾಡಲಿವೆ ಮುಂತಾದ ಮಾಹಿತಿ ಬೇಕೆಂದರೆ ಅದು ಬಿಡುಗಡೆಯಾಗುವವರೆಗೆ ಕಾಯಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಮಿಕ್ಕ ಸಂಸ್ಥೆಗಳೂ ತ್ರೀ ಫೋಲ್ಡ್ ಫೋನನ್ನು ಬಿಡುಗೊಳಿಸಿದರೆ ಆಶ್ಚರ್ಯವಿಲ್ಲ.