Advertisement

ಮೂವರು ಅಂತಾರಾಜ್ಯ ಸರಗಳ್ಳರ ಸೆರೆ

06:00 AM Mar 08, 2019 | |

ಬೆಂಗಳೂರು: ಕಳವು ಮಾಡಿದ ಬೈಕ್‌ಗಳಲ್ಲಿ ಸುತ್ತಾಡಿ ಸರ ಕಳವು ಮಾಡುತ್ತಿದ್ದ ಮೂವರು ಅಂತಾರಾಜ್ಯ ಸರಗಳ್ಳರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನ ಅರುಣ್‌ ಕುಮಾರ್‌ ಅಲಿಯಾಸ್‌ ಅರುಳ್‌ (33), ಕಾರ್ತಿಕ್‌ (30), ಜಯಕುಮಾರ್‌ (37) ಬಂಧಿತರು.

Advertisement

ಇವರಿಂದ 40 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. 220 ಗ್ರಾಂ. ಚಿನ್ನದ ಸರಗಳು, ಎರಡು ಪಲ್ಸರ್‌ ಬೈಕ್‌ ಹಾಗೂ ಒಂದು ಚಾಕು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳವು ಸೇರಿ ಒಟ್ಟು 37 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಹತ್ತು ತಿಂಗಳಿಂದ ಸರಗಳ್ಳತನ ಕೃತ್ಯದಲ್ಲಿ ತೊಡಗಿರುವ ಆರೋಪಿಗಳು, ಯಲಹಂಕ ಹಾಗೂ ಯಶವಂತಪುರದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು. ಪೇಟಿಂಗ್‌, ವೆಲ್ಡಿಂಗ್‌ ಕೆಲಸ ಮಾಡುತ್ತಿರುವುದಾಗಿ ಮನೆ ಮಾಲೀಕರಿಗೆ ಸುಳ್ಳು ಹೇಳಿದ್ದರು. ಆದರೆ, ಪ್ರತಿ ನಿತ್ಯ ಕಳವು ಮಾಡಿದ ಬೈಕ್‌ಗಳಲ್ಲಿ ಒಳ ಮತ್ತು ಹೊರ ವರ್ತುಲ ರಸ್ತೆಗಳಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಸರಗಳ್ಳತನ ಮಾಡಿಕೊಂಡು ನೇರವಾಗಿ ತಮಿಳುನಾಡಿಗೆ ಹೋಗುತ್ತಿದ್ದರು. ನಂತರ ಕಳವು ವಸ್ತುಗಳನ್ನು ತಮಿಳುನಾಡಿನ ಖಾಸಗಿ ಬ್ಯಾಂಕ್‌ಗಳಲ್ಲಿ ಅಡಮಾನ ಇಡುತ್ತಿದ್ದರು. 

ತಮಿಳುನಾಡಿನಿಂದ ಕರ್ನಾಟಕ್ಕೆ ಬರುವಾಗ ಮತ್ತೆ ಮಾಯಕರ ಸರಗಳವು ಮಾಡಿ, ಬೆಂಗಳೂರಿಗೆ ಬಂದು, ಇಲ್ಲಿನ ಖಾಸಗಿ ಫೈನಾನ್ಸ್‌ಗಳಲ್ಲಿ ಚಿನ್ನಾಭರಣ ಮಾರಾಟ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಹನುಮಂತನಗರ, ಬಸವನಗುಡಿ, ಜಯನಗರ, ಬನಶಂಕರಿ, ಕೆಂಪೇಗೌಡ ನಗರ ಸೇರಿ ಹಲವೆಡೆ ಬೈಕ್‌ಗಳಲ್ಲಿ ಸುತ್ತಾಡಿ, ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು.

ಸರ ಕಳವು ಮಾಡಲೆಂದೇ ಆರೋಪಿಗಳು ಕೆಂಪೇಗೌಡ ನಗರದಲ್ಲಿ ಎರಡು ಬೈಕ್‌ ಕದ್ದು, ಅವುಗಳ ನಂಬರ್‌ ಪ್ಲೇಟ್‌ ಬದಲಿಸಿ ಒಂದು ಬೈಕನ್ನು ಬೆಂಗಳೂರಿನಲ್ಲಿ ಮತ್ತು ಮತ್ತೂಂದು ಬೈಕನ್ನು ತಮಿಳುನಾಡಿನಲ್ಲಿ ಕೃತ್ಯಕ್ಕೆ ಉಪಯೋಗಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next