ಹಾವೇರಿ: ಮೂರು ದಶಕದ ಬಳಿಕ ಅಪ್ಪ-ಮಗ ಮುಖಾಮುಖಿಯಾಗಿ ಆಲಂಗಿಸಿ, ಆನಂದಿಸಿದ ಅಪರೂಪದ ಮಧುರ ಕ್ಷಣಕ್ಕೆ ನಗರದ ಜಿಲ್ಲಾಸ್ಪತ್ರೆ ರವಿವಾರ ಸಾಕ್ಷಿಯಾಯಿತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುಟ್ಟಿನಿಂದಲೇ ನೋಡದ ಅಪ್ಪನನ್ನು ಕಾಣಲು ದೂರದ ಕರ್ನೂಲ್‌ನಿಂದ ಬಂದ ಮಗ, ತನ್ನ ಹಡೆದಪ್ಪನನ್ನು ಬಿಗಿದಪ್ಪಿ ಜೀವನದ ಅಪರೂಪದ ಅಮೂಲ್ಯ ವಸ್ತು ಸಿಕ್ಕಂತೆ ಸಂಭ್ರಮಿಸಿದವನು ಸೂರ್ಯನಾರಾಯಣ ರೆಡ್ಡಿ. ಹುಟ್ಟಿದಾಗಿನಿಂದ ನೋಡದೆ ಮಗ 32 ವರ್ಷದವನಾದ ಬಳಿಕ ನೋಡಿ ಖುಷಿಪಟ್ಟಿದ್ದು ತಂದೆ ಸಿ. ಬಾಲರೆಡ್ಡಿ (65).
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಿ.ಬಾಲರೆಡ್ಡಿ 32 ವರ್ಷಗಳ ಹಿಂದೆ ಊರು ಬಿಟ್ಟು ಬಂದಿದ್ದರು. ಆಗ ಆತನ ಪತ್ನಿ ವೆಂಕಟಲಕ್ಷ್ಮಿಆರು ತಿಂಗಳ ಗರ್ಭಿಣಿ. ಬಳಿಕ ಗಂಡು ಮಗ ಹುಟ್ಟಿದರೂ ತಂದೆ ಮನೆಗೆ ಮರಳಿ ಹೋಗಿರಲಿಲ್ಲ. ರಾಜ್ಯದ ವಿವಿಧೆಡೆ ಅಲೆದಾಡಿ ಕಳೆದ 10 ವರ್ಷಗಳಿಂದ ತಾಲೂಕಿನ ನೆಲೋಗಲ್ಲನಲ್ಲಿ ಕ್ರಷರ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಜೀವನದಲ್ಲಿ ಬೇಸರಗೊಂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು, ಸ್ಥಳೀಯರು ಬಾಲರೆಡ್ಡಿಯ ಕುಟುಂಬದವರ ಬಗ್ಗೆ ಹುಡುಕಾಟ ನಡೆಸಿದಾಗ ಈ ಮಾಹಿತಿ ಮಗ ಸೂರ್ಯನಾರಾಯಣನಿಗೂ ದೊರೆತು ಅಪ್ಪನನ್ನು ನೋಡಲು ಜಿಲ್ಲಾಸ್ಪತ್ರೆಗೆ ಬಂದಿದ್ದನು.
ಮಗ ಸೂರ್ಯನಾರಾಯಣರೆಡ್ಡಿ ಸದ್ಯ ಕರ್ನೂಲಿನಲ್ಲಿ ಬ್ಯಾಂಕ್ ವೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗಿ ತನ್ನ ಪತ್ನಿ, ಮಗಳು ಹಾಗೂ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಅಪ್ಪ ಎಲ್ಲಿಯೋ ಇದ್ದಾನೆ. ಆತನನ್ನು ನೋಡಬೇಕು. ಆತನನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಎಂಬ ಅಸೆ ಇದ್ದರೂ ಅಪ್ಪನ ಇರುವಿಕೆ ಬಗ್ಗೆ ಸುಳಿವು ದೊರೆತಿರಲಿಲ್ಲ. ತಂದೆ ವಿಷ ಸೇವಿಸಿದ ಘಟನೆ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟ ಅಪ್ಪ-ಮಗನನ್ನು ಒಂದಾಗಿಸಿದೆ.
ಅಪ್ಪ ಬದುಕಿದ್ದಾನೆ ಎಂಬ ವಿಷಯ ಗೊತ್ತಾದ ಕೂಡಲೇ ಮಗ ಸೂರ್ಯನಾರಾಯಣ ರೆಡ್ಡಿ ತನ್ನ ದೊಡ್ಡಮ್ಮನೊಂದಿಗೆ ಕರ್ನೂಲಿನಿಂದ ಹಾವೇರಿಗೆ ಆಗಮಿಸಿದನು. ರವಿವಾರ ಜಿಲ್ಲಾಸ್ಪತ್ರೆಯ ಜನರಲ್ ವಾರ್ಡ್‌ಗೆ ಬಂದಾಗ ದೊಡ್ಡಮ್ಮನ ಸಹಾಯದಿಂದ ಇವರೇ ತನ್ನಪ್ಪ ಎಂಬುದು ಗುರುತು ಪತ್ತೆ ಹಚ್ಚಿ ‘ಅಪ್ಪಾ ಐ ಲವ್ ಯೂ ಪಾ’ ಎಂದು ಅಪ್ಪನನ್ನು ಕಂಡು ಬಿಗಿದಪ್ಪಿಕೊಂಡು ಆನಂದಭಾಷ್ಪ ಸುರಿಸಿದರು. ಅಪ್ಪ-ಮಗನ ಈ ಭೇಟಿಯ ಅಪರೂಪದ ಕ್ಷಣವನ್ನು ಕಂಡು ಆಸ್ಪತ್ರೆಯಲ್ಲಿರುವ ರೋಗಿಗಳು, ರೋಗಿಗಳ ಪೋಷಕರು ಸಹ ಆನಂದಭಾಷ್ಪ ಸುರಿಸಿದರು.
ಹುಟ್ಟಿದಾಗಿನಿಂದ ಅಪ್ಪನ ಮುಖ ನೋಡಿರಲಿಲ್ಲ. ಆದರೆ, ಎಲ್ಲೋ ಅಪ್ಪ ಬದುಕಿದ್ದಾನೆ ಎಂದು ಮನಸ್ಸು ಹೇಳುತ್ತಿತ್ತು. ಅಪ್ಪನನ್ನು ನೋಡಲು ಪ್ರತಿ ಕ್ಷಣ ಕಾಯುತ್ತಿದ್ದೆ. ಆದರೆ, ಅವರಿರುವ ಬಗ್ಗೆ ಮಾಹಿತಿ ಸಿಗಲೇ ಇಲ್ಲ. ಹಾವೇರಿಯಲ್ಲಿ ಇರುವ ವಿಷಯ ಗೊತ್ತಾದ ತಕ್ಷಣ ಇಲ್ಲಿಗೆ ಬಂದಿರುವೆ. ಸದ್ಯ ಅಪ್ಪ ಸಿಕ್ಕಿದ್ದು ತುಂಬ ಖುಷಿ ತಂದಿದೆ. ಅವರನ್ನು ಮನೆಗೆ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ.
●
ಸೂರ್ಯನಾರಾಯಣ ರೆಡ್ಡಿ, ಮಗ
ಈ ಹಿಂದೆ ನಡೆದ ಕಹಿ ಘಟನೆ ಮರೆಯುತ್ತೇನೆ. ಮಗನನ್ನು ನೋಡಿ ಖುಷಿಯಾಗಿದೆ. ಮಗ ಮನೆಗೆ ಕರೆದುಕೊಂಡು
ಹೋಗಲು ಬಂದಿದ್ದಾನೆ. ಮಗನ ಪ್ರೀತಿ ಮುಂದೆ ಏನೂ ಅಲ್ಲ. ನಾನು ಮರುಜೀವನ ಸಂಭ್ರಮಿಸುತ್ತೇನೆ.
●ಸಿ.ಬಾಲರೆಡ್ಡಿ, ಅಪ್ಪ