ರಂಭೆ ಪಾತ್ರ, ಭಾಷಾ ಸಂಸ್ಕೃತಿ ಯಾವ ರೀತಿಯ ಪಾತ್ರಕ್ಕೂ ಬೆಲೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಶ್ವೇತಕುಮಾರನು ಆಕೆಯೊಂದಿಗೆ ದಿನವೊಂದರ ಸುಖಕ್ಕೆ ಬರುವ ಸನ್ನಿವೇಶವಾದರೂ ಅಲೆವೂರಾಯರ ಗಂಭೀರ, ಸ್ಪಷ್ಟ ಮಾತು ಕಿಂಚಿತ್ತೂ ಋಣಾತ್ಮಕ ಆಲೋಚನೆಗೆ ಆಸ್ಪದ ಕೊಡದೇ ಶಿವ ಪಂಚಾಕ್ಷರಿಯ ಪಠಣದ ಅವಶ್ಯಕತೆಯನ್ನು ಹೇಳಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆಯಲ್ಲಿ ತ್ರಿದಿನ ಯಕ್ಷ ವೈಭವದ ವೈತರಣಿಯು ಅಡೆತಡೆಯಿಲ್ಲದೇ ಹರಿದು ಯಕ್ಷರಸಿಕರ ಮನಸ್ಸಿಗೆ ತಂಪೆರೆಯಿತು. ರಾಜ ಅತಿಕಾಯ-ಇಂದ್ರಜಿತು ಮತ್ತು ಗಜೇಂದ್ರ ಮೋಕ್ಷ ಹಾಗೂ ಕೊನೆಯ ದಿನ ಶ್ವೇತಕುಮಾರ ಚರಿತ್ರೆ ಪ್ರಸಂಗಗಳು ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನಕ್ಕೂ, ಪ್ರತಿಭೆಯನ್ನು ಹರಿತಗೊಳಿಸುವುದಕ್ಕೂ ಅವಕಾಶ ನೀಡಿತು.
ಶ್ರೀ ದುರ್ಗಾಪರಮೆಶ್ವರೀ ಯಕ್ಷಗಾನ ಕಲಾ ಮಂಡಳಿ ಕೊಲ್ಲಂಗಾನ ಕಾಸರಗೋಡು ಅವರು ಪ್ರದರ್ಶಿಸಿದ ಶ್ವೇತಕುಮಾರ ಚರಿತ್ರೆ, ಕುಮಾರಿ ಹೇಮಸ್ವಾತಿ ಕುರಿಯಜೆಯವರ ಭಾಗವತಿಕೆಯೊಂದಿಗೆ ಪ್ರಾರಂಭಗೊಂಡಿತು. ಈ ಅರಳು ಪ್ರತಿಭೆಯ ಭಾವಗತಿ ಯಕ್ಷಲೋಕದಲ್ಲಿ ಮುಂದೆ ತನ್ನ ಛಾಪನ್ನು ಭದ್ರವಾಗಿ ಮೂಡಿಸುವತ್ತ ಹೆಜ್ಜೆ ಇಟ್ಟಂತಿತ್ತು. ತಾಳಜ್ಞಾನ ಹಾಗೂ ಎಲ್ಲೂ ಬತ್ತದ ಸ್ವರದಿಂದ ಭಾಗವತಿಕೆ ಮನಸೆಳೆಯಿತು.
ತನ್ನ ತಂದೆಯ ಉತ್ತರಾಧಿಕಾರಿಯಾಗಿ ರಾಜ್ಯಭಾರ ಮಾಡುತ್ತಿದ್ದ ಶ್ವೇತಕುಮಾರ ಬೇಸರ ಕಳೆಯಲು ವನ ವಿಹಾರಕ್ಕೆ ಹೊರಟಾಗ, (ಬ್ರಹ್ಮನ) ಪುತ್ರಿಯಾದ ತ್ತೈಲೋಕ ಸುಂದರಿ ಭೂಮಿಗಿಳಿದು ಅದೇ ವನ ಸಂಚಾರಕ್ಕೆಂದು ಬಂದವಳ ಭೇಟಿಯಾಗುತ್ತದೆ. ಆಕೆಯ ಅದ್ವಿತೀಯ ರೂಪಕ್ಕೆ ಮರುಳಾಗುವಲ್ಲಿಂದ ಶ್ವೇತಕುಮಾರ ಚರಿತ್ರೆಯ ಕಥೆ ಪ್ರಾರಂಭವಾಗುತ್ತದೆ. ಶ್ವೇತಕುಮಾರನಾಗಿ ಉಬರಡ್ಕ ಉಮೇಶ ಶೆಟ್ಟಿ ಹಾಗೂ ತ್ತೈಲೋಕ ಸುಂದರಿಯಾಗಿ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಪಾತ್ರ ನಿರ್ವಹಿಸಿದರು. ವರ್ತಮಾನಕ್ಕೆ ಥಳುಕು ಹಾಕಿದ ಅರ್ಥಗಾರಿಕೆಯಿಂದ ಸಮಾಜದಲ್ಲಾಗುವ ತಪ್ಪುಗಳಿಗೆ ಬುದ್ಧಿ ಹೇಳುವಂತೆ ಚುರುಕು ಮುಟ್ಟಿಸುವ ಮಾತುಗಳಲ್ಲಿ ಇಬ್ಬರೂ ಸ್ಪರ್ಧಾತ್ಮಕವಾಗಿದ್ದರು. ಶ್ವೇತಕುಮಾರನ ಪದ್ಯಗಳಿಗೆ ಮತ್ತು ಮಾತುಗಳಿಗೆ ಅರ್ಥ ಬರುವಂತೆ ತ್ತೈಲೋಕ ಸುಂದರಿಯು ರೂಪ, ಭಾವಗಳಲ್ಲಿ ಪ್ರೇಕ್ಷಕರ ಮನ ಮೆಚ್ಚಿಸುವ ಚಲನವಲನಗಳು ಸೊಗಸಾಗಿದ್ದವು. ಮೇಳದ ಕಲಾವಿದರೂ, ಯಜಮಾನರೂ ಆದ ತಂತ್ರಿ ಗಣಾಧಿರಾಜ ಉಪಾಧ್ಯಾಯರ ಅಬ್ಬರದ ಪ್ರವೇಶದೊಂದಿಗೆ ದುರ್ಜಯಾಸುರ ಮೈನವಿರೇಳಿಸಿದ ಪಾತ್ರ ನಿರ್ವಹಣೆ, ಸುಭಾಶ್ಚಂದ್ರ ರೈ ತೋಟ ಇವರು ಲೋಹಿತನೇತ್ರನಾಗಿ, ಪ್ರವೀಣ ನಾರ್ಣಕಜೆ ಶಿವೆಯಾಗಿ ಪಾತ್ರಗಳಿಗೆ ಜೀವಂತಿಕೆ ನೀಡಿದರು, ಶಿವೆಯ ಮಾತು ಮತ್ತು ಅಭಿನಯ ನಿಜ ಭಾವಾಭಿವ್ಯಕ್ತವೆನಿಸಿತು. ಓರ್ವ ಘಾಸಿಗೊಂಡ ಹೆಣ್ಣಿನ ನೋವು, ತಿರಸ್ಕಾರಗಳನ್ನು ಮನೋಜ್ಞವಾಗಿ ಅಭಿನಯಿಸಿದ್ದು ಶಿವೆಯ ಪ್ಲಸ್ ಪಾಯಿಂಟ್.
ಶ್ವೇತ ಕುಮಾರನ ಮಂತ್ರಿಯ ಮಗ ಸಿತಕೇತನಾಗಿ ಲಕ್ಷ್ಮಣ ಆಚಾರ್ಯ ಎಡಮಂಗಲ ಅವರದ್ದು ಚುರುಕಿನ ಕುಣಿತ ಮತ್ತು ನಿರರ್ಗಳ ವಾಗ್ಝರಿ. ಶ್ವೇತಕುಮಾರನು ಪ್ರೇತನಾದವನು ತನ್ನ ಸತಿಯ ನೆನೆಯುತ್ತಿದ್ದನು ಎಂಬ ಭಾಗವತ ಜಯರಾಮ ಅಡೂರು ಅವರ ಸುಮಧುರ ಕಂಠದ ಭಾಗವತಿಕೆಯಲ್ಲಿ ಶ್ವೇತಕುಮಾರನ ದುರಂತ ಅಂತ್ಯಕ್ಕೆ ಮರುಕವೂ, ಪ್ರೇತದ ಪಾತ್ರಕ್ಕೆ ಜೀವ ತುಂಬಿದ ರಘುನಾಥ ರೈ ಅಂಕತಡ್ಕ ಅವರ ಹಾಸ್ಯಕ್ಕೆ ನಗುವುದು ಹೀಗೆ ಭಾವ ಸಮ್ಮಿಶ್ರದಿಂದ ಕೂಡಿದ ಪ್ರೇಕ್ಷಕವರ್ಗ ಮುಂದಿನ ಕತೆಯನ್ನು ಆಸ್ವಾದಿಸಿತು.
ರವಿ ಅಲೆವೂರಾಯ ಅವರ ರಂಭೆ ಪಾತ್ರ, ಒಂದು ಭಾಷಾ ಸಂಸ್ಕೃತಿ ಯಾವ ರೀತಿಯ ಪಾತ್ರಕ್ಕೂ ಬೆಲೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಈ ಪಾತ್ರವು ಜನರಲ್ಲಿ ಮೂಡಿಸುವ ಕಲ್ಪನೆಯೇ ಬೇರೆ. ಶ್ವೇತಕುಮಾರನು ಆಕೆಯೊಂದಿಗೆ ದಿನವೊಂದರ ಸುಖಕ್ಕೆ ಬರುವ ಸನ್ನಿವೇಶವಾದರೂ ರವಿ ಅಲೆವೂರಾಯರ ಗಂಭೀರ, ಸ್ಪಷ್ಟ ಮಾತು ಕಿಂಚಿತ್ತೂ ಋಣಾತ್ಮಕ ಆಲೋಚನೆಗೆ ಆಸ್ಪದ ಕೊಡದೇ ಮಾತುಕತೆಯ ಹಿಂದಿನ ಧಾರ್ಮಿಕ ಸತ್ಯವನ್ನು ತೆರೆದಿಟ್ಟು ಶಿವ ಪಂಚಾಕ್ಷರಿಯ ಪಠಣದ ಅವಶ್ಯಕತೆಯನ್ನು ಹೇಳುತ್ತಾ ಪ್ರೇಕ್ಷಕರ ಭಾವನೆಗಳನ್ನು ತಮ್ಮ ಮಾತಿನಲ್ಲಿ ನಿಯಂತ್ರಿಸಿ ಪಾತ್ರದ ಪ್ರಾಮುಖ್ಯವನ್ನು ತೋರಿಸಿಕೊಟ್ಟರು.ಪ್ರೇತವು ಮತ್ತೆ ಶ್ವೇತಕುಮಾರನಾಗಿ ದುರ್ಜಯನ ವಧೆಯೊಂದಿಗೆ ವಿಧಿ ಲಿಖೀತದಂತೆ ದುಷ್ಟ ಸಂಹಾರಕ್ಕಾಗಿ ಎನ್ನುವಲ್ಲಿಗೆ ಕತೆ ಮುಕ್ತಾಯಗೊಂಡಿತು. ಚಂಡೆವಾದಕರಾಗಿ ಕುಮಾರ ಸುಬ್ರಹ್ಮಣ್ಯ, ಎರಡನೇ ದುರ್ಜಯನಾಗಿ ಈಶ್ವರ, ಚಿತ್ರಗುಪ್ತನಾಗಿ ಸುಂದರ ಇಂದ್ರಾಜೆ ಪಾತ್ರ ನಿರ್ವಹಿಸಿದರು. ಪುಟಾಣಿಗಳಾದ ಶ್ರೀಮಾ ಸುಳ್ಯ, ಮಾನ್ಸಿ ಸುರೇಶ್ ರೈ, ಅನ್ವಿತ್ ಗೋಪ ಚುರುಕಿನ ನಾಟ್ಯ ಪ್ರದರ್ಶಿಸಿ ಪುಳಕಗೊಳಿಸಿದರು.
ವಾರಿಜಾಕ್ಷಿ ಯಶ್. ಡಮ್ಮಡ್ಕ