ಮೈಸೂರು: ತಿರುಮಕೂಡಲು ಶ್ರೀಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆದ 11ನೇ ಮಹಾ ಕುಂಭಮೇಳಕ್ಕೆ ಮಂಗಳವಾರ ವರ್ಣರಂಜಿತ ತೆರೆ ಬಿದ್ದಿದ್ದು, ಮೂರೂ ದಿನ ಅಂದಾಜು 3 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಮಾಡಲಾಗಿದ್ದ ಅಚ್ಚುಕಟ್ಟಾದ ವ್ಯವಸ್ಥೆ, ಬಿಗಿ ಭದ್ರತೆಗೆ ಪ್ರಶಂಸೆ ವ್ಯಕ್ತವಾಗಿದೆ.
ತಿರುಮಕೂಡಲುವಿನ ಶ್ರೀ ಅಗಸ್ತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯ, ಅಂಕುರಾರ್ಪಣೆಯೊಂದಿಗೆ ರವಿವಾರ ಬೆಳಗ್ಗೆ ಮಾಘ ಮಾಸದ ಪುಣ್ಯಸ್ನಾನಕ್ಕೆ ಚಾಲನೆ ದೊರಕಿತ್ತು. ಮಂಗಳವಾರ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರದತ್ತ ಹರಿದು ಬಂದರು. ತ್ರಿವೇಣಿ ಸಂಗಮದಲ್ಲಿ ಮಿಂದು, ಅಗಸೆöàಶ್ವರ ಸ್ವಾಮಿ ಮತ್ತು ಗುಂಜಾ ನರಸಿಂಹಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ಸ್ವಾಮೀಜಿಗಳು, ಗಣ್ಯರು, ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. 3 ದಿನಗಳ ಕುಂಭಮೇಳದಲ್ಲಿ ಮೊದಲ ದಿನ ಭಕ್ತರ ಸಂಖ್ಯೆ ಕಡಿಮೆಯಿತ್ತಾದರೂ ಇನ್ನುಳಿದ 2 ದಿನಗಳು ಭಕ್ತರು ಕಿಕ್ಕಿರಿದು ಸೇರಿದ್ದರು. 3 ದಿನದಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ.
ಪ್ರೋಕ್ಷಣೆಗೆ ಸೀಮಿತರಾದ ಸಿಎಂ
ಸಿಎಂ ಕುಮಾರಸ್ವಾಮಿ ಬೆಳಗ್ಗೆ 11ಕ್ಕೆ ಕ್ಷೇತ್ರಕ್ಕೆ ಆಗಮಿಸಿ, ನದಿಗೆ ಇಳಿದರಾದರೂ ಪುಣ್ಯಸ್ನಾನ ಮಾಡಲಿಲ್ಲ. ಸಂಗಮದ ನೀರನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಧನ್ಯತೆ ಮೆರೆದರು. ಸಚಿವ ಸಾ.ರಾ.ಮಹೇಶ್ ಕೂಡ ಪ್ರೋಕ್ಷಣೆಗೆ ಸೀಮಿತರಾದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ, ಜಿ.ಟಿ.ದೇವೇಗೌಡ ಮತ್ತು ಶಾಸಕರು ಪುಣ್ಯಸ್ನಾನ ಮಾಡಿದರು. ಧರ್ಮ ಸಭೆಯಲ್ಲಿ ಕುಂಭಮೇಳದ ಯಶಸ್ಸಿಗೆ ಸಹಕರಿಸಿದ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.
ಕುಂಭಮೇಳದಲ್ಲಿ 14 ನಿರ್ಣಯ ಅಂಗೀಕಾರ
ತಿ.ನರಸಿಪುರ: ಸಂಗಮ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದೂ ಸೇರಿದಂತೆ
11ನೇ ಮಹಾಕುಂಭ ಮೇಳದಲ್ಲಿ 14 ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರಕ್ಕೆ ಒಪ್ಪಿಸಲಾಯಿತು. ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀ, ಮೈಸೂರು ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರನ್ನು ಒಳಗೊಂಡಿರುವ ಕುಂಭಮೇಳ ಟ್ರಸ್ಟ್ ಈ ನಿರ್ಣಯ ತೆಗೆದುಕೊಂಡಿದ್ದು, ನಿರ್ಣಯಗಳ ಪ್ರತಿಯನ್ನು ಮಂಗಳವಾರ ನಡೆದ ಧರ್ಮಸಭೆಯಲ್ಲಿ ಮುಖ್ಯಮಂತ್ರಿಗೆ ನೀಡಲಾಯಿತು.