ಬೆಂಗಳೂರು: ನಗರದಾದ್ಯಂತ ಸೋಮವಾರ ಮತ್ತೆ ಮಳೆ ಅಬ್ಬರಿಸಿದ್ದು, ಇನ್ನೂ ಎರಡು-ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ.
ಸಂಜೆ 5ರ ಸುಮಾರಿಗೆ ಶುರುವಾದ ಮಳೆ ಅರ್ಧ ತಾಸು ಧಾರಾಕಾರವಾಗಿ ಸುರಿಯಿತು. ಇದರಿಂದ ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡವು. ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಕಚೇರಿಗಳಿಂದ ಮನೆಗೆ ಹಿಂತಿರುಗುವ ನೌಕರರಿಗೆ ಇದರ ಬಿಸಿ ತುಸು ಜೋರಾಗಿ ತಟ್ಟಿತು.
ನಗರದಲ್ಲಿ ಸೋಮವಾರ ಗರಿಷ್ಠ 33 ಮಿ.ಮೀ. ಮಳೆಯಾಗಿದೆ. ರಾಜರಾಜೇಶ್ವರಿನಗರದಲ್ಲಿ 26 ಮಿ.ಮೀ., ಬೊಮ್ಮನಹಳ್ಳಿ 23, ಬಸವನಗುಡಿ 17.5, ಕೆಂಗೇರಿ 15, ಕೆ.ಆರ್. ಪುರ 15.5, ಎಚ್. ಗೊಲ್ಲಹಳ್ಳಿ 12, ಮಂಡೂರು 11, ಶಿಗೇಹಳ್ಳಿ 18, ಕುಮಾರಸ್ವಾಮಿ ಲೇಔಟ್ 9, ಕೋರಮಂಗಲ 8, ಲಾಲ್‌ಬಾಗ್ 6, ನಾಗರಬಾವಿ 5 ಮಿ.ಮೀ. ಮಳೆಯಾಗಿದೆ.
ಉತ್ತರದಿಂದ ತಮಿಳುನಾಡು ಮಧ್ಯೆ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ಉಂಟಾಗಿದ್ದು, ಇದು ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಹಾದುಹೋಗಿದೆ. ಅದೇ ರೀತಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ. ಆದರೆ ರಾಜ್ಯದ ಮೇಲೆ ಇದರ ಯಾವುದೇ ಪ್ರಭಾವ ಇರುವುದಿಲ್ಲ. ಮಲೆನಾಡು, ಕರಾವಳಿಯಲ್ಲಿ ಮಾತ್ರ ಇದು ತುಸು ಮಳೆ ಸುರಿಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಐದಾರು ಮರ ಧರೆಗೆ: ನಗರದಲ್ಲಿ ಸೋಮವಾರ ಸುರಿದ ಮಳೆಗೆ ಐದಾರು ಮರಗಳು ಧರೆಗುರುಳಿದ್ದು, ಅಂಡರ್ ಪಾಸ್‌ಗಳಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಸೋಮವಾರ ಸಂಜೆ ಸುಮಾರಿಗೆ ಸುರಿದ ನಿರಂತರ ಮಳೆಗೆ ಜೆ.ಪಿ.ನಗರದ ಡಾಲರ್ ಕಾಲೋನಿ, ಅಮೊRà ಬಡಾವಣೆ, ಡಬಲ್ ರಸ್ತೆ ಸೇರಿದಂತೆ ಹಲವೆಡೆ ಬೃಹತ್ ಮರಗಳು ಧರೆಗುರುಳಿದ್ದು, ವೈಯಾಲಿಕಾಲವ್, ಮಲ್ಲೇಶ್ವರ, ಬಸವನಗುಡಿ ಸೇರಿದಂತೆ ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ಧರೆಗುರುಳಿವೆ.
ಇನ್ನು ಒಕಳಿಪುರ ಹಾಗೂ ಸ್ಯಾಂಕಿ ರಸ್ತೆ ಅಂಡರ್ ಪಾಸ್‌ಗಳಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರು ಅಂಡರ್‌ಪಾಸ್‌ಗಳಲ್ಲಿ ಸಂಚಾರಿಸಲಾಗದೆ ತೊಂದರೆ ಅನುಭವಿಸಿದರು. ಈ ಕುರಿತು ಪಾಲಿಕೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.