Advertisement

28ರಿಂದ ಮೂರು ದಿನ ಮೆಟ್ರೋ ಸೇವೆ ಸ್ಥಗಿತ

12:18 PM Dec 22, 2018 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಸೇವೆ ಶನಿವಾರ ಮತ್ತು ಭಾನುವಾರ ಎಂದಿನಂತೆ ಇರಲಿದ್ದು, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ಮೂರು ದಿನಗಳು ವ್ಯತ್ಯಯ ಆಗಲಿದೆ. ಟ್ರಿನಿಟಿ ವೃತ್ತದಲ್ಲಿ ಪತ್ತೆಯಾದ ಹನಿಕಾಂಬ್‌ ದುರಸ್ತಿಯನ್ನು ಡಿ.28ರಿಂದ ಕೈಗೆತ್ತಿಕೊಳ್ಳಲಾಗುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಅಂದು ರಾತ್ರಿ 8ರಿಂದ ಡಿ.30ರವರೆಗೆ ಎಂ.ಜಿ. ರಸ್ತೆಯಿಂದ ಇಂದಿರಾನಗರ ನಿಲ್ದಾಣದ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗುವುದು. 31ರ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸೇವೆ ಮತ್ತೆ ಎಂದಿನಂತೆ ಪುನರಾರಂಭಗೊಳ್ಳಲಿದೆ. ಈ ಮಧ್ಯೆ ಉಳಿದ ಮಾರ್ಗಗಳಲ್ಲಿ ಮೆಟ್ರೋ ಕಾರ್ಯಾಚರಣೆ ಮಾಮೂಲಿ ಆಗಿರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸ್ಪಷ್ಟಪಡಿಸಿದೆ. 

ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಯು ಕಬ್ಬನ್‌ ಉದ್ಯಾನದಿಂದ ಬೈಯಪ್ಪನಹಳ್ಳಿವರೆಗೆ ಎರಡೂ ಮಾರ್ಗಗಳಲ್ಲಿ 28ರಿಂದ 30ರವರೆಗೆ (ಬರುವ ಮತ್ತು ಹೋಗುವ) ಉಚಿತ ಬಸ್‌ ಸೇವೆ ಕಲ್ಪಿಸಲಾಗಿದೆ. 28ರಂದು ರಾತ್ರಿ 8ರಿಂದ 11ರವರೆಗೆ ಬಸ್‌ ಸೇವೆ ಇರಲಿದೆ. 

ಇನ್ನು ಉತ್ತರ-ದಕ್ಷಿಣದ ಮೆಟ್ರೋ ಪ್ರಯಾಣಿಕರಿಗೆ ಎಂ.ಜಿ.ರಸ್ತೆ ನಿಲ್ದಾಣದ ನಂತರ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಡಿ.28ರ ಸಂಜೆ 6.45 ಕೊನೆಯ ರೈಲು. ಎಂ.ಜಿ. ರಸ್ತೆ-ಇಂದಿರಾನಗರ ನಡುವೆ ಸೇವೆ ಸ್ಥಗಿತಗೊಂಡ ಸಂದರ್ಭದಲ್ಲಿ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಎರಡೂ ಬದಿಯಿಂದ ಕನಿಷ್ಠ 6ರಿಂದ ಗರಿಷ್ಠ 15 ನಿಮಿಷಗಳ ಅಂತರದಲ್ಲಿ ರೈಲು ಕಾರ್ಯಾಚರಣೆ ಮಾಡಲಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ನಿಗಮವು ಪ್ರಕಟಣೆಯಲ್ಲಿ ಕೋರಿದೆ.

ರಸ್ತೆ ಕಂ ರೈಲು ಮೇಲ್ಸೇತುವೆ ಯೋಜನೆ
ಬೆಂಗಳೂರು:
ಕೆ.ಆರ್‌. ಪುರ- ಸಿಲ್ಕ್ಬೋರ್ಡ್‌ ಜಂಕ್ಷನ್‌ (ಹಂತ 2ಎ) ನಡುವಿನ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್‌ ರದ್ದುಗೊಳಿಸಿದ ಬೆನ್ನಲ್ಲೇ ಆ ಮಾರ್ಗದ ವಿನ್ಯಾಸವನ್ನೂ ಬದಲಿಸಲು ಬಿಎಂಆರ್‌ಸಿಲ್‌ ಮುಂದಾಗಿದೆ. 

Advertisement

ಮೆಟ್ರೋ ಮೂಲ ಸೌಕರ್ಯದಿಂದ ಸಹಜ ಸಂಚಾರ ವ್ಯವಸ್ಥೆಗೆ ತಡೆಯಾಗಬಾರದು ಎಂಬ ಕಾರಣಕ್ಕೆ ಯೋಜನೆಯ ಮೂರನೇ ಪ್ಯಾಕೇಜ್‌ (ದೊಡ್ಡನೆಕ್ಕುಂದಿ -ಕೆ.ಆರ್‌.ಪುರ) ಬದಲಾವಣೆಗೆ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಕಂ ರೈಲು ಫ್ಲೈಓವರ್‌ ಯೋಜನೆಗೆ ಚಿಂತನೆ ನಡೆದಿದ್ದು,

ಇದು ಕೆ.ಆರ್‌.ಪುರ ಜಂಕ್ಷನ್‌ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಪ್ರದೇಶದಲ್ಲಿ ಉಂಟಾಗುವ ಸಂಚಾರ ದಟ್ಟಣೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮೊದಲಿನ ವಿನ್ಯಾಸದಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಸಂಚಾರ ಸ್ಥಿತಿಗತಿ ಸುಧಾರಣೆ ಹೊಸ ಯೋಜನೆ ರೂಪಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next