ಹೊಸದಿಲ್ಲಿ: ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದ ಆಟೋ ಚಾಲಕನನ್ನು ಪೊಲೀಸ್ ವಾಹನದಲ್ಲಿದ್ದ ಮೂವರು ಪೊಲೀಸರು ಹೀನಾಯವಾಗಿ ಹಲ್ಲೆ ಮಾಡಿರುವ ಘಟನೆ ಪಶ್ಚಿಮ ದಿಲ್ಲಿಯ ಮುಖರ್ಜಿ ನಗರದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ವೈರಲ್ ಆಗುತ್ತಲೇ, ದಿಲ್ಲಿ ಪೊಲೀಸ್ ಇಲಾಖೆ, ಚಾಲಕನನ್ನು ಥಳಿಸಿದ ಆರೋಪ ಹೊತ್ತಿರುವ ಸಬ್ ಇನ್ಸ್‌ಪೆಕ್ಟರ್‌ಗಳಾದ ಸಂಜಯ್ ಮಲಿಕ್, ದೇವೇಂದ್ರ ಹಾಗೂ ಪೇದೆ ಪುಷ್ಪೇಂದ್ರ ಎಂಬವರನ್ನು ಅಮಾನತುಗೊಳಿಸಿದೆ.
ಏನಿದು ಘಟನೆ?: ಪೊಲೀಸ್ ವಾಹನಕ್ಕೆ ಎದುರುಗಡೆಯಿಂದ ಬಂದ ಆಟೋ ಡಿಕ್ಕಿ ಹೊಡೆದಿದೆ. ಆಗ, ಪೊಲೀಸರು ಹಾಗೂ ಆಟೋ ಚಾಲಕನ ನಡುವೆ ಮಾತಿನ ಚಕಮಕಿ ಆರಂಭಗೊಂಡು, ಒಂದು ಹಂತದಲ್ಲಿ ರೊಚ್ಚಿಗೆದ್ದ ಚಾಲಕ ಆಟೋದಲ್ಲಿದ್ದ ತನ್ನ ಕತ್ತಿ ಹೊರತೆಗೆದು ಪೊಲೀಸರಿಗೆ ಹೆದರಿಸಲು ಯತ್ನಿಸಿದ್ದಾನೆ. ಇದರಿಂದ, ಸಿಟ್ಟಿಗೆದ್ದ ಪೊಲೀಸರು ಚಾಲಕನನ್ನು ಆಟೋದಿಂದ ಹೊರಗೆಳೆದು ಲಾಠಿಗಳಿಂದ ಹೀನಾಯವಾಗಿ ಬಡಿದಿದ್ದಾರೆ.
ಕೇಜ್ರಿವಾಲ್ ಅಸಮಾಧಾನ: ಘಟನೆ ಖಂಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಪ್ಪಿತಸ್ಥ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಂಜಾಬ್ ಸಿಎಂ ಬೇಸರ: ಅತ್ತ, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಕೂಡ, ಕೇಂದ್ರ ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪೊಲೀಸರದ್ದೇ ತಪ್ಪು: ದಿಲ್ಲಿಯ ಗುರುದ್ವಾರದ ಪ್ರಬಂಧಕ ಸಮಿತಿಯ ಮಾಜಿ ಮುಖ್ಯಸ್ಥ ಮಂಜಿತ್ ಸಿಂಗ್, “”ಚಾಲಕನಿಗೆ ಪೊಲೀಸರೇ ಮೊದಲು ಪಿಸ್ತೂಲು ತೋರಿಸಿದ್ದಾರೆ. ಇದೇ ಜಗಳಕ್ಕೆ ಕಾರಣವಾಗಿ, ಪೊಲೀಸರು ಆತನನ್ನು ಥಳಿಸಿದ್ದಾರೆ” ಎಂದು ಹೇಳಿದ್ದಾರೆ.