Advertisement

ಕರಾವಳಿಯಲ್ಲಿ ಸತತ ಮೂರು ವರ್ಷ ಹಿಂಗಾರು ವಿಫ‌ಲ

12:50 AM Sep 15, 2019 | mahesh |

ಮಂಗಳೂರು: ಕರಾವಳಿಯಲ್ಲಿ ಮಾನ್ಸೂನ್‌ ಆರಂಭದಲ್ಲಿ ಉತ್ತಮವಾಗಿಲ್ಲದಿದ್ದರೂ ಆಗಸ್ಟ್‌ ಮೊದಲ ವಾರದಿಂದ ಯಥೇತ್ಛ ಮಳೆ ಸುರಿಯುತ್ತಿದೆ. ಸೆಪ್ಟಂಬರ್‌ ಕೊನೆಯವರೆಗೆ ಮಳೆ ಇದೇ ರೀತಿ ಮುಂದುವರಿದರೆ ಹಿಂಗಾರು ಉತ್ತಮವಾಗಿರ ಬಹುದು ಎಂಬುದು ಹವಾ ಮಾನ ತಜ್ಞರ ಅಂಬೋಣ.

Advertisement

ಸೆಪ್ಟಂಬರ್‌ ಅರ್ಧ ಭಾಗದ ವರೆಗೆ ಸುರಿದ ಮಳೆಯ ಆಧಾರದಲ್ಲಿ ಹಿಂಗಾರು ಹೇಗಿರಲಿದೆ ಎಂಬ ಲೆಕ್ಕಾಚಾರಕ್ಕೆ ಹವಾಮಾನ ಇಲಾಖೆ ಬರುತ್ತದೆ. ಆದರೆ ಈ ಬಾರಿಯ ಮಾನ್ಸೂನ್‌ ಇಲಾಖೆಯ ಭವಿಷ್ಯವನ್ನು ತಲೆಕೆಳಗಾಗಿಸಿದೆ. ಈ ಬಾರಿ ವಾಡಿಕೆಯಂತೆ ಮಳೆ ಸುರಿಯುತ್ತದೆ ಎಂದು ಅದು ಈ ಹಿಂದೆ ಮುನ್ಸೂಚನೆ ನೀಡಿತ್ತು. ಆದರೆ ಸದ್ಯ ರಾಜ್ಯದ 16 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿಲ್ಲ. ಕರಾವಳಿ ಭಾಗದಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ದ.ಕ. ಜಿಲ್ಲೆಯಲ್ಲಿ ಶೇ. 7ರಷ್ಟು ಮಳೆ ಕೊರತೆ ಇದೆ.

ಸೆಪ್ಟಂಬರ್‌ ಅಂತ್ಯದಿಂದ ಡಿಸೆಂಬರ್‌ ಅಂತ್ಯದವರೆಗೆ ಸುರಿಯುವ ಹಿಂಗಾರು ಮಳೆಯ ಆಧಾರದಲ್ಲಿ ಹೇಳುವುದಾದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂರು ವರ್ಷ ಹಿಂಗಾರು ಕೈಕೊಟ್ಟಿದೆ. ದ.ಕ. ಜಿಲ್ಲೆಯಲ್ಲಿ 2016ರಲ್ಲಿ ಶೇ. 67, 2017ರಲ್ಲಿ ಶೇ. 31 ಮತ್ತು 2018ರಲ್ಲಿ ಶೇ. 3ರಷ್ಟು ಮಳೆ ಕೊರತೆ ಇತ್ತು. ಉಡುಪಿಯಲ್ಲಿ ಮಳೆ ಕೊರತೆ 2016ರಲ್ಲಿ ಶೇ. 65, 2017ರಲ್ಲಿ ಶೇ. 5 ಮತ್ತು 2018ರಲ್ಲಿ ಶೇ. 38ರಷ್ಟು ಇತ್ತು.

ಉಭಯ ಜಿಲ್ಲೆಗಳಲ್ಲಿ ಅಡಿಕೆ ಮುಖ್ಯ ವಾಣಿಜ್ಯ ಬೆಳೆ. ಅಡಿಕೆ ಗಿಡಗಳ ಫಲವತ್ತತೆಗೆ ಹಿಂಗಾರು ಮಳೆ ಮುಖ್ಯ. ಸೆಪ್ಟಂಬರ್‌ ಅಂತ್ಯದ ವೇಳೆಗೆ ಮರಗಳಿಗೆ ಗೊಬ್ಬರ ಹಾಕಿ ಹಿಂಗಾರು ಮಳೆಗಾಗಿ ಕಾಯುತ್ತಾರೆ. ಈ ಬಾರಿಯ ಮುಂಗಾರು ಗಮನಿಸಿ ಕೃಷಿಕರಿಗೆ ಆತಂಕ ಆರಂಭವಾಗಿದೆ. ಮಾನ್ಸೂನ್‌ ಏರುಪೇರು ಹಿಂಗಾರಿಗೂ ಮುಂದುವರಿದರೆ ಕೃಷಿಗೆ ತೊಂದರೆಯಾಗಬಹುದು.

ನೇತ್ರಾವತಿ ಮಟ್ಟ ಏರಿಕೆ
ಕಳೆದ ವರ್ಷಕ್ಕೆ ಹೋಲಿಸಿದರೆ ನೇತ್ರಾವತಿ ನದಿ ನೀರಿನ ಮಟ್ಟ ಈ ವರ್ಷ ಕೊಂಚ ಏರಿಕೆ ಕಂಡಿದೆ. ಕಳೆದ ವರ್ಷ ಸೆ. 5ಕ್ಕೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 17 ಎಂಟಿಎಸ್‌ ಇತ್ತು. ಈ ವರ್ಷ 25 ಎಂಟಿಎಸ್‌ ಇದೆ. ಅದೇ ರೀತಿ ಕುಮಾರಧಾರಾ ಮಟ್ಟ ಕಳೆದ ವರ್ಷ 17 ಎಂಟಿಎಸ್‌ ಇತ್ತಾದರೆ ಈ ವರ್ಷ 17 ಎಂಟಿಎಸ್‌ ಇದೆ.

Advertisement

ರಾಜ್ಯದಲ್ಲೂ ಕಡಿಮೆ ಹಿಂಗಾರು
ಕಳೆದ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಹಿಂಗಾರು ಮಳೆ ಸುರಿದಿದ್ದು, ಒಟ್ಟಾರೆ ಶೇ. 48ರಷ್ಟು ಕೊರತೆಯಾಗಿತ್ತು. ಶೇ. 85ರಷ್ಟು ಅತೀ ಕಡಿಮೆ ಹಿಂಗಾರು ಮಳೆ ಯಾದಗಿರಿಯಲ್ಲಿ ದಾಖಲಾಗಿತ್ತು.

ಸೆಪ್ಟಂಬರ್‌ ಮೊದಲಾರ್ಧದಲ್ಲಿ ಎಷ್ಟು ಮಳೆ ಸುರಿಯುತ್ತದೆ ಎಂಬ ಆಧಾರದಲ್ಲಿ ಹಿಂಗಾರು ಮಳೆ ಲೆಕ್ಕಾಚಾರ ಹಾಕಲಾಗುತ್ತದೆ. ಕರಾವಳಿಯಲ್ಲಿ ಈ ಬಾರಿಯ ಮುಂಗಾರು ಉತ್ತಮವಾಗಿರಲಿಲ್ಲ. ಮಾನ್ಸೂನ್‌ ಕಾಲಿಟ್ಟ ಮೊದಲ ಎರಡು ತಿಂಗಳು ಮಳೆ ಇರಲಿಲ್ಲ. ಆಗಸ್ಟ್‌ ಮೊದಲ ವಾರ ಭಾರೀ ಮಳೆ ಸುರಿಯಲಾರಂಭಿಸಿತ್ತು.
– ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ


– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next