Advertisement

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

02:31 PM Jun 04, 2018 | |

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಯನ್ನು ಮೂರು ಪಕ್ಷಗಳೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Advertisement

ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟಾರೆ 20678 ಶಿಕ್ಷಕ ಮತದಾರರಿದ್ದು, ಕ್ಷೇತ್ರ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಪೈಕಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿದ್ದು, ಮೈಸೂರು ಜಿಲ್ಲೆಯಲ್ಲಿ 9643, ಮಂಡ್ಯ ಜಿಲ್ಲೆಯಲ್ಲಿ 4853, ಹಾಸನ ಜಿಲ್ಲೆಯಲ್ಲಿ 4277 ಹಾಗೂ ಚಾಮರಾಜ ನಗರ ಜಿಲ್ಲೆಯಲ್ಲಿ ಅತಿ ಕಡಿಮೆ 1899 ಮತದಾರರಿದ್ದಾರೆ.

ಸತತ ಮೂರು ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ವಿಧಾನಪರಿಷತ್‌ ಉಪ ಸಭಾಪತಿ ಮರಿತಿಬ್ಬೇಗೌಡ, ಮೂರು ಬಾರಿಯೂ ಮೂರು ಚಿಹ್ನೆಗಳ ಮೇಲೆ ಆರಿಸಿ ಬಂದಿರುವುದು ವಿಶೇಷ.

ಯಾರ್ಯಾರು ಕಣದಲ್ಲಿ: 2000ನೇ ಇಸವಿಯಲ್ಲಿ ಕಾಂಗ್ರೆಸ್‌ ಪಕ್ಷ, 2006ರಲ್ಲಿ ಪಕ್ಷೇತರ, 2012ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದ ಮತದಾರರ ಮೇಲೆ ತಮಗಿರುವ ಹಿಡಿತವನ್ನು ಸಾಬೀತುಮಾಡಿರುವ ಮರಿತಿಬ್ಬೇಗೌಡ ಈ ಬಾರಿಯೂ ಜೆಡಿಎಸ್‌ ಅಭ್ಯರ್ಥಿ.

ಕಾಂಗ್ರೆಸ್‌ನಿಂದ ಎಂ.ಲಕ್ಷ್ಮಣ, ಬಿಜೆಪಿಯಿಂದ ಬಿ.ನಿರಂಜನಮೂರ್ತಿ ಅಭ್ಯರ್ಥಿಯಾಗಿದ್ದಾರೆ. ಉಳಿದಂತೆ ಪಕ್ಷೇತರರಾದ ಎ.ಎಚ್‌.ಗೋಪಾಲ ಕೃಷ್ಣ, ಡಿ.ಕೆ.ತುಳಸಪ್ಪ, ಡಾ.ಎಸ್‌.ಬಿ.ಎಂ. ಪ್ರಸನ್ನ, ಡಾ.ಮಹದೇವ, ಎಂ.ಎನ್‌.ರವಿಶಂಕರ್‌, ಪಿ.ಎ.ಶರತ್‌ ರಾಜ್‌ ಕಣದಲ್ಲಿದ್ದಾರೆ.

Advertisement

ಮತದಾರರ ಸಂಖ್ಯೆ ಕಡಿಮೆಯಿದ್ದರೂ ಅಭ್ಯರ್ಥಿಗಳಿಗೆ ಅವರನ್ನು ತಲುಪುವುದೇ ದೊಡ್ಡ ಸಮಸ್ಯೆ, ಚಾಮರಾಜ ನಗರ ಜಿಲ್ಲೆಯಲ್ಲಿ ತಮಿಳುನಾಡು ಗಡಿ, ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಕೇರಳದ ಗಡಿ, ಹಾಸನ ಜಿಲ್ಲೆಯಲ್ಲಿ ಸಕಲೇಶಪುರ, ಅರಸೀಕೆರೆ ತಾಲೂಕುಗಳ ಗಡಿ ಗ್ರಾಮಗಳಲ್ಲಿರುವ ಶಿಕ್ಷಕ ಮತದಾರರನ್ನು ತಲುಪಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದು,

ಕಳೆದ ಆರು ತಿಂಗಳಿಂದಲೇ ಪ್ರಚಾರ ಕಾರ್ಯ ಆರಂಭಿಸಿರುವ ಮೂರು ಪಕ್ಷಗಳ ಅಭ್ಯರ್ಥಿಗಳು ನಾಲ್ಕೂ ಜಿಲ್ಲೆಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಒಂದು ಸುತ್ತಿನ ಭೇಟಿ ನೀಡಿ ಮತಯಾಚನೆ ಮಾಡಿ ಬಂದಿದ್ದಾರೆ. ಇನ್ನುಳಿದ ಮೂರು ದಿನಗಳಲ್ಲಿ ಸಾಧ್ಯವಾದಷ್ಟೂ ಶಿಕ್ಷಕರುಗಳನ್ನು ಸೇರಿಸಿ ಸಭೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳ ಚಿತ್ತ ಅತಿ ಹೆಚ್ಚು ಮತದಾರರಿರುವ ಮೈಸೂರು ಜಿಲ್ಲೆಯ ಮೇಲಿದೆ.

ಇಲ್ಲೂ ಬಿಟ್ಟಿಲ್ಲ ಆಮಿಷ: ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರಿಗೆ ಹಣ, ಹೆಂಡದ ಆಮಿಷ ಒಡ್ಡುವುದು ಸಾಮಾನ್ಯವಾಗಿದೆ. ಆದರೆ, ಸುಶಿಕ್ಷಿತ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಹೊಂದಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನೂ ಜಾತೀ ಪ್ರಭಾವ, ಹಣ, ಹೆಂಡದ ಆಮಿಷಗಳು ಬಿಟ್ಟಿಲ್ಲ. ಈಗಾಗಲೇ ಅಲ್ಲಲ್ಲಿ ಒಂದು ಸಮುದಾಯದ ಶಿಕ್ಷಕರನ್ನು ಸೇರಿಸಿ ಜಾತೀಯ ಪ್ರಭಾವ ಬೀರುವ, ಹೆಂಡ-ಬಾಡೂಟ ಹಾಕಿಸಲಾಗುತ್ತಿದ್ದರೂ ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ. 

ಸರ್ಕಾರದ ಹಿರಿಯ ಅಧಿಕಾರಿಗಳೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಇಂತದ್ದೇ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಫ‌ರ್ಮಾನು ಹೊರಡಿಸುವ, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಜಾತಿಗೆ ಸೇರಿದ ಅಭ್ಯರ್ಥಿಗೇ ಮತಹಾಕುವಂತೆ ಶಿಕ್ಷಕರು ಅದರಲ್ಲೂ ಶಿಕ್ಷಕಿಯರ ಮೇಲೆ ಒತ್ತಡ ಹೇರುವ ಪ್ರಯತ್ನಗಳೂ ಅಲ್ಲಲ್ಲಿ ನಡೆಯುತ್ತಿದೆ.

ಜೊತೆಗೆ ಮತಗಟ್ಟೆಗಳ ಬಳಿಯೂ ಶಿಕ್ಷಕರು ಜಾತಿವಾರು ಅಭ್ಯರ್ಥಿಗಳ ಪರ ನಿಂತು ಕಡೇ ಕ್ಷಣದಲ್ಲಿ ಮತದಾರ ಶಿಕ್ಷಕರನ್ನು ಮನವೊಲಿಸಲು ಪ್ರಯತ್ನ ಪಡುವುದನ್ನು ನೋಡಿದರೆ, ಸಾರ್ವತ್ರಿಕ ಚುನಾವಣೆಗೂ ಈ ಚುನಾವಣೆಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಇರುತ್ತದೆ ಚುನಾವಣಾ ಕಣದ ಚಿತ್ರಣ. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಈ ಬಾರಿ ತಮ್ಮದಾಗಿಸಿಕೊಳ್ಳಬೇಕೆಂದು ಜಿದ್ದಿಗೆ ಬಿದ್ದಂತೆ ಆಯಾಯ ಪಕ್ಷಗಳ ಶಾಸಕರು, ಸ್ಥಳೀಯ ಮುಖಂಡರುಗಳು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.

ಬಿಎಸ್‌ವೈ ಸಭೆ: ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಪರ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಮತಯಾಚನೆಗೆ ಬರುತ್ತಿದ್ದು, ಸೋಮವಾರ ಚಾಮರಾಜ ನಗರ ಜಿಲ್ಲೆ, ಮಂಗಳವಾರ ಮೈಸೂರಿನಲ್ಲಿ ಶಿಕ್ಷಕರ ಜೊತೆಗೆ ಸಂವಾದ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ.

ನೋಟಾಗೆ ಅವಕಾಶ: ಪ್ರಾಶಸ್ತ್ಯದ ಮತದಾನಕ್ಕೆ ಅವಕಾಶವಿರುವುದರಿಂದ ಈ ಚುನಾವಣೆಯಲ್ಲಿ ಮತಪತ್ರವನ್ನು ಬಳಸಲಿದ್ದು, ಈ ಬಾರಿ ನೋಟಾಗೂ ಅವಕಾಶ ನೀಡಲಾಗಿದೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next