ನವಾಡಾ, ಬಿಹಾರ : ಬಿಹಾರದ ನವಾಡಾ ಜಿಲ್ಲೆಯಲ್ಲಿ ಸಂಭವಿಸಿದ ಮೋಟಾರ್ ಬೈಕ್ ಅಪಘಾತದಲ್ಲಿ ಮೂವರು ತರುಣರು ಅಸುನೀಗಿದ ಘಟನೆ ವರದಿಯಾಗಿದೆ.
ಈ ಘಟನೆಯನ್ನು ಅನುಸರಿಸಿ ಮೃತರ ಮನೆಯವರು ವೈದ್ಯರು ಸಕಾಲಿಕ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂಬ ಕಾರಣಕ್ಕೆ ಕ್ರುದ್ಧರಾಗಿ ಸರಕಾರಿ ಆಸ್ಪತ್ರೆಯನ್ನು ಚೆಲ್ಲಾಡಿ ಹಾನಿ ಉಂಟುಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿದ ಅಮಲಿನಲ್ಲಿದ್ದರು ಎನ್ನಲಾದ ಮೂವರು ತರುಣರು ಸವಾರರಾಗಿದ್ದ ಮೋಟರ್ ಬೈಕ್ ಅಕ್‌ಬರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಸ್ತಾನ್‌ಗಂಜ್ ಗ್ರಾಮದಲ್ಲಿ ಕಾಂಕ್ರೀಟ್ ಹಾಕಿ ಎತ್ತರಿಸಲ್ಪಟ್ಟಿದ್ದ ರಚನೆಯೊಂದಕ್ಕೆ ಢಿಕ್ಕಿ ಹೊಡೆದಿದ್ದರು.
ಬೈಕಿನಲ್ಲಿದ್ದ ಮೂವರ ಪೈಕಿ ಇಬ್ಬರು ನವಾಡಾ ಸದರ್ ಆಸ್ಪತ್ರೆಯಲ್ಲಿ ಮೃತಪಟ್ಟರೆ ಇನ್ನೊಬ್ಬ ಪಟ್ನಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಒಯ್ಯಲ್ಪಡುವಾಗಲೇ ಕೊನೆಯುಸಿರೆಳೆದ.
ಇವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕ್ರುದ್ದರಾದ ಅವರ ಮನೆಯವರು ಆಸ್ಪತ್ರೆಯ ಎಮರ್ಜೆನ್ಸಿ, ಗೈನೆಕಾಲಜಿ, ಪೀಡಿಯಾಟ್ರಿಕ್ಸ್, ಜನರಲ್ ವಾರ್ಡ್‌ಗಳನ್ನು ಚೆಲ್ಲಾಡಿ ಆಸ್ಪತ್ರೆಗೆ ಭಾರೀ ಹಾನಿ ಉಂಟುಮಾಡಿದರು. ಈ ಕೃತ್ಯ ಎಸಗಿದ ಆರೋಪದ ಮೇಲೆ 12 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೃತ ಬೈಕ್ ಸವಾರರನ್ನು ದೀಪಕ್ ಕುಮಾರ್ 20, ಸತೀಶ್ ಕುಮಾರ್ ರಾಯ್ 19 ಮತ್ತು ಛೋಟೂ 18 ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಬುಂದೇಲ್‌ಖಂಡ್ ಪೊಲೀಸ್ ಠಾಣೆ ವ್ಯಾಪ್ತಿ ಸುಧಾಮ ನಗರ ಗ್ರಾಮದವರೆಂದು ಗೊತ್ತಾಗಿದೆ.