ವಿಜಯಪುರ: ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ.19 ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಹತ್ಯೆಯಾದ ಮಹಿಳೆಯ ಮಗನೂ ಸೇರಿದ್ದಾನೆ.
ಬಂಧಿತರನ್ನು ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಹತ್ಯೆಯಾಗಿದ್ದ ಪಾರ್ವತಿ ತಳವಾರ ಈಕೆಯ ಮಗ ಲಕ್ಷ್ಮಣ ಭೀಮಪ್ಪ ತಳವಾರ, ಆತನ ಸ್ನೇಹಿತರಾದ ಶಶಿಕುಮಾರ ರಂಗಪ್ಪ ಮಣಗೂರು ಹಾಗೂ ಬಸವರಾಜ ಪರಪ್ಪ ಹಡಪದ ಎಂದು ಗುರುತಿಸಲಾಗಿದೆ.
ಲಕ್ಷ್ಮಣ ತಳವಾರ ಹತ್ಯೆಯಾಗಿರುವ ಪಾರ್ವತಿಯ ಮಗ. ಪಾರ್ವತಿ ಗಣಿ ಗ್ರಾಮದ ಸೋಮನಿಂಗಪ್ಪ ಕುಂಬಾರ ಎಂಬಾತನೊಂದಿಗೆ ಅನೈತಿಕ ಸಬಂಧ ಹೊಂದಿದ್ದಳು. ತಾಯಿಯ ಅನೈತಿಕ ಸಂಬಂಧದಿಂದ ರೋಸಿ ಹೋಗಿದ್ದ ಮಗ ಲಕ್ಷ್ಮಣ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಹತ್ಯೆಯ ಸಂಚು ರೂಪಿಸಿದ್ದ.
ಮಾ.18 ರಂದು ರಾತ್ರಿ ಆಕಳವಾಡಿ-ಮಾರಡಗಿ ಬಳಿ ಲಕ್ಷ್ಮಣನ ತಾಯಿ ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಸೇರಿದಂತೆ ಜೋಡಿ ಕೊಲೆ ಮಾಡಿ, ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ನಿಡಗುಂದಿ ಸಿಪಿಐ ಶರಣಗೌಡ ಗೌಡರ, ಎಸೈ ಶಿವರಾಜ ಧರಿಗೋಣ ನೇತೃತ್ವದ ತನಿಖಾ ತಂಡ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ್ದಾಗಿ ಎಸ್ಪಿ ಋಷಿಕೇಶ ಭಗವಾನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.