ರಾಜಸ್ಥಾನ್: 20 ವರ್ಷದ ಯುವಕನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಸಹೋದರಿ ಜತೆ ನಿಲ್ಲಿಸಿ ಟಿಕ್ ಟಾಕ್ ವೀಡಿಯೋ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಜೈಪುರ್ ಆದರ್ಶನಗರದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಪುಷ್ಪೇಂದ್ರಾ ಸಿಂಗ್ ಈ ಕುರಿತು ವಿವರ ನೀಡಿದ್ದು, ಆರೋಪಿಗಳು ಮತ್ತು ಸಂತ್ರಸ್ತ ಯುವಕ ನೆರೆಹೊರೆಯವರಾಗಿದ್ದರು. ಸಂತ್ರಸ್ತ ಯುವಕ ಟಿಕ್ ಟಾಕ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದನ್ನು ಆರೋಪಿಗಳಲ್ಲಿ ಒಬ್ಬನ ತಂಗಿ ಶೇರ್ ಮಾಡಿದ್ದಳು. ಇದನ್ನು ವೀಕ್ಷಿಸಿದ ಗೆಳೆಯನೊಬ್ಬ ಆರೋಪಿಗೆ ವಿಷಯ ತಿಳಿಸಿ, ಇಬ್ಬರ ನಡುವೆ ಪ್ರೇಮಸಂಬಂಧವಿದೆ. ನಾವು ಆತನಿಗೊಂದು ಪಾಠ ಕಲಿಸಬೇಕೆಂದು ನಿರ್ಧರಿಸಿದ್ದರು ಎಂದು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಆರೋಪಿ ಹಾಗೂ ಇತರ ಒಂಬತ್ತು ಮಂದಿ ಗೆಳೆಯರು ಯುವಕನ ಮನೆಗೆ ಬಂದು ಕರೆದಿದ್ದರು. ಹೊರ ಬಂದ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಯುವಕನ ಬಟ್ಟೆ ಕಳಚಿ ನಗ್ನಗೊಳಿಸಿ ಮೆರವಣಿಗೆ ಮಾಡಿಸಿ, ಟಿಕ್ ಟಾಕ್ ವೀಡಿಯೋ ಮಾಡಿರುವುದಾಗಿ ಸಿಂಗ್ ವಿವರಿಸಿದ್ದಾರೆ.
ಯುವಕ ಆರಂಭದಲ್ಲಿ ಎಫ್ ಐಆರ್ ದಾಖಲಿಸಲಿಲ್ಲವಾಗಿತ್ತು. ಶನಿವಾರ ಸಂತ್ರಸ್ತ ಯುವಕ ಎಫ್ ಐಆರ್ ದಾಖಲಿಸಿದ್ದ, ಆದರೆ ಆರೋಪಿಗಳಲ್ಲಿ ಒಬ್ಬ ಯುವಕನ ಟಿಕ್ ಟಾಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ. ಇದು ಪೊಲೀಸ್ ಠಾಣೆವರೆಗೂ ತಲುಪಿತ್ತು. ಯುವಕ ತನ್ನ ತಂಗಿಗೆ ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿಯೂ ಆರೋಪಿಸಿ, ಪ್ರತಿ ದೂರು ನೀಡಿರುವುದಾಗಿ ವರದಿ ತಿಳಿಸಿದೆ.
ಸಂತ್ರಸ್ತ ಯುವಕನ ಮೇಲೆ ಪೋಸ್ಕೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಐಟಿ ಕಾಯ್ದೆ 341, 342, 323 ಹಾಗೂ 147 ಕಲಂ ಅನ್ವಯ ದೂರು ದಾಖಲಾಗಿದೆ. ಯುವಕನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ರಚಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.