ಬೆಂಗಳೂರು: ಇದೊಂದು ವಿಚಿತ್ರ ಪ್ರಕರಣ. ಪ್ರಿಯತಮೆಯ ಪತಿಯನ್ನು ಕೊಲೆಗೈದು ಆಕೆಯ ಜತೆ ವಾಸಿಸಲು ಸುಪಾರಿ ನೀಡಿದ ಪ್ರಿಯಕರನೇ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುಪಾರಿ ಪಡೆದ ಆರೋಪಿಗಳು ಆತನನ್ನು ಕೊಲೆ ಮಾಡಿದ್ದೇವೆ ಎಂದು ಸಾಸ್ ಚೆಲ್ಲಿದ ಫೋಟೋ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ನಂಬಿಸಿದ್ದರಷ್ಟೇ. ಅಸಲಿಗೆ ಆತ ಕೊಲೆಯೇ ಆಗಿರಲಿಲ್ಲ. ಆದರೆ, ಪ್ರಿಯತಮೆಗಾಗಿ ಸುಪಾರಿ ಕೊಟ್ಟ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿದ್ದ.
ಇಂತದ್ದೊಂದು ಪ್ರಕರಣ ಪೀಣ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸುಪಾರಿ ಕೊಡಲು ಪ್ರೇರೇಪಣೆ ನೀಡಿದ್ದ ಮಹಿಳೆ ಹಾಗೂ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೊಡ್ಡಬಿದರಕಲ್ಲು ನಿವಾಸಿ ಪಲ್ಲವಿ, ಹರೀಶ್, ಮುಗಿಲನ್, ಅಮ್ಮಜಮ್ಮ ಬಂಧಿತರು. ಪಲ್ಲವಿ ಪ್ರಿಯಕರ ಹಿಮವಂತ್ ಆತ್ಮಹತ್ಯೆ ಮಾಡಿಕೊಂಡವ. ಅಪಹರಣಕ್ಕೊಳಗಾದರೂ ಪ್ರಾಣಾಪಾಯದಿಂದ ಪರಾರಾದವರು ಪಲ್ಲವಿ ಪತಿ ನವೀನ್‌ಕುಮಾರ್.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ ; ತೀರ್ಥಯಾತ್ರೆಗೆ ತೆರಳಿದ್ದ 7 ಮಂದಿ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ಘಟನೆ ಹಿನ್ನೆಲೆ: ನವೀನ್ ಕುಮಾರ್ ಚೊಕ್ಕಸಂದ್ರ ದಲ್ಲಿ ವಿಲ್ಲಿಂಗ್ ಫ್ಯಾಕ್ಟರಿ ನಡೆಸಿಕೊಂಡಿದ್ದಾರೆ. ಇದರ ಜತೆಗೆ ಕಾರು ಚಾಲನೆ ವೃತ್ತಿಯನ್ನು ಮಾಡುತ್ತಿದ್ದರು. ದೊಡ್ಡ ಬಿದರಕಲ್ಲು ಬಳಿ ಪತ್ನಿ ಪಲ್ಲವಿ ಹಾಗೂ ಇಬ್ಬರು ಮಕ್ಕಳ ಜತೆಗೆ ವಾಸಿಸುತ್ತಿದ್ದರು. ಪತ್ನಿಗೆ ಹಿಮ ವಂತ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೇಮಾಂಕುರಕ್ಕೆ ತಿರುಗಿತ್ತು. ನಂತರ ಪತಿ ನವೀನ್‌ನನ್ನು ಕೊಲೆ ಮಾಡಿ ಇಬ್ಬರು ಜತೆಯಾಗಿ ವಾಸಿಸಲು ಸಂಚು ರೂಪಿಸಿದ್ದರು. ಅದರಂತೆ ನವೀನ್ ಕೊಲೆಗೆ ಮೂವರಿಗೆ ಹಿಮವಂತ್ ಸುಪಾರಿ ಕೊಟ್ಟಿದ್ದ. ಅದರಂತೆ ಮೂವರು ಆರೋಪಿಗಳು ತಮಿಳು ನಾಡಿಗೆ ಟ್ರಿಪ್ ಹೊಗಬೇಕೆಂದು ಹೇಳಿ ನವೀನ್ ಕುಮಾರ್ ಕಾರು ಬುಕ್ ಮಾಡಿದ್ದರು. ಕಾರಿನಲ್ಲಿ ತಮಿಳುನಾಡಿಗೆ ಹೋಗುತ್ತಿದ್ದಂತೆ ನವೀನ್‌ಗೆ ಬೆದರಿಸಿ ಅಪಹರಿಸಿದ್ದರು.
ನವೀನ್‌ನನ್ನು ಕೊಲೆ ಮಾಡಲು ಹೆದರಿದ ಹಂತಕರು, ಆತನಿಗೆ ಮದ್ಯಪಾನ ಮಾಡಿಸಿ ಆತನ ಮೈ ಮೇಲೆ ಸಾಸ್ ಚೆಲ್ಲಿ ಅದರ ಫೋಟೋವನ್ನು ಹಿಮವಂತ್‌ಗೆ ಕಳುಹಿಸಿ ಕೊಲೆ ಮಾಡಿರುವುದಾಗಿ ಹೇಳಿದ್ದರು. ನವೀನ್ ಕುಮಾರ್ ಮೊಬೈಲ್ ಕೆಲ ದಿನಗಳಿಂದ ಸ್ವಿಚ್ಛ್‌ಆಫ್ ಆಗಿರುವುದನ್ನು ಗಮನಿಸಿದ ಅವರ ಸಹೋದರ ಪೀಣ್ಯ ಪೊಲೀಸ್ ಠಾಣೆಯಲ್ಲಿ ನವೀನ್ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಇತ್ತ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆ ಆತಂಕಗೊಂಡ ಹಿಮವಂತ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಸುಪಾರಿ ಹಂತಕರು ನವೀನ್‌ನನ್ನು ಬಿಟ್ಟು ಕಳುಹಿಸಿದ್ದಳು. ಇದಾದ ಬಳಿಕ ನವೀನ್ ಮನೆಗೆ ವಾಪಸ್ಸಾಗಿ, ಆರೋಪಿಗಳು ಅಪಹರಣ ಮಾಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು.
ಪೊಲೀಸರು ಅನುಮಾನದ ಮೇರೆಗೆ ಪಲ್ಲವಿಯನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪಲ್ಲವಿ ಹಾಗೂ ಸುಪಾರಿ ಪಡೆದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.