ಬೆಂಗಳೂರು: ಮದ್ಯದ ವಿಚಾರಕ್ಕೆ ಸ್ನೇಹಿತನನ್ನು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ನಿವಾಸಿ ವಸಂತ ಕುಮಾರ್ (25), ಸರಣ್ ರಾಜ್(26) ಮತ್ತು ಮುಗುಂದನ್ (25) ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಆರೋಪಿಗಳು ಜುಲೈ 27ರಂದು ತಡರಾತ್ರಿ ಮಾರುಕಟ್ಟೆಯಲ್ಲೇ ಹೂ ವ್ಯಾಪಾರಿ ಪ್ರಶಾಂತ್ ಎಂಬಾತನನ್ನು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.
ತಮಿಳುನಾಡು ಮೂಲದ ಆರೋಪಿಗಳು, ಬೆಂಗಳೂರಿಗೆ ಬಂದು ಹಲವು ವರ್ಷಗಳಾಗಿವೆ. ಸಿಟಿ ಮಾರುಕಟ್ಟೆಯಲ್ಲಿ ಹೂ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಜುಲೈ 27ರಂದು ರಾತ್ರಿ ಪ್ರಶಾಂತ್ ಜತೆ 7 ಮಂದಿ ಆರೋಪಿಗಳು ಸಮೀಪದ ಬಾರ್‌ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ತಡರಾತ್ರಿ 12.30ರ ಸುಮಾರಿಗೆ ಬಾರ್‌ನಿಂದ ಮಾರುಕಟ್ಟೆ ಬಂದಾಗ, ಪ್ರಶಾಂತ್, ಕುಡಿಯಲು ಹಣ ಕೊಡುವಂತೆ ಆರೋಪಿಗಳಿಗೆ ಪೀಡಿಸಿದ್ದಾನೆ. ಅದೇ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಪ್ರಶಾಂತ್ ಬಿಯರ್ ಬಾಟಲಿಯಿಂದ ಆರೋಪಿಗಳಿಗೆ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿಂದ ಮದ್ಯದ ಬಾಟಲಿಯಿಂದ ಪ್ರಶಾಂತ್ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ರಾಜ್ಯದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮವನ್ನು ಪ್ರಶಂಸಿದ ಪ್ರಧಾನಿ ಮೋದಿ
ತಮಿಳುನಾಡಿನಲ್ಲಿ ಬಂಧನ: ಕೃತ್ಯ ಎಸಗಿದ ಬಳಿಕ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಿದ್ದರು. ಈ ಖಚಿತ ಮಾಹಿತಿ ಮೇರೆಗೆ ವಿಶೇಷ ತಂಡ ತಮಿಳುನಾಡಿಗೆ ಹೋದಾಗ, ತಿರುವಣಾಮಲೈನ ತಂದ್ರಾಮ್‌ಪಟ್ಟು ಬಸ್ ನಿಲ್ದಾಣದಿಂದ ಕೇರಳಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪತ್ತೆ ಕಾರ್ಯ ಮಂದುವರಿದಿದೆ ಎಂದು ಪೊಲೀಸರು ಹೇಳಿದರು.
ಸಿಟಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ, ಎಸಿಪಿ ಕೆ.ಸಿಗಿರಿ ಮತ್ತು ಸಿಟಿ ಮಾರುಕಟ್ಟೆ ಠಾಣಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.