ಬೆಂಗಳೂರು: ಹೆಡ್ ಕಾನ್‌ಸ್ಟೇಬಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಯನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್‌ನ ಸೈಯದ್ ಸಫಿ (28) ಬಂಧಿತ. ಆರೋಪಿ ವಿರುದ್ಧ ವಿಲ್ಸನ್‌ಗಾರ್ಡನ್ ಸಂಚಾರ ಠಾಣೆ ಹೆಡ್‌ಕಾನ್ ಸ್ಟೇಬಲ್ ಸಿದ್ರಾಮೇಶ್ವರ ಕೌಜಲಗಿ ಎಂಬುವರು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಫೆ.12ರಂದು ಹೆಡ್‌ಕಾನ್‌ಸ್ಟೇಬಲ್ ಸಿದ್ರಾಮೇಶ್ವರ ಕೌಜಲಗಿ ಮತ್ತು ಲೋಕೇಶ್ ಡಾ ಮರೀಗೌಡ ರಸ್ತೆಯ 10ನೇ ಕ್ರಾಸ್ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಆರೋಪಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಆಗ ಸಿದ್ರಾಮೇಶ್ವರ ಕೌಜಲಗಿ ತಮ್ಮ ಮೊಬೈಲ್ ತೆಗೆದು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಅದನ್ನು ಗಮನಿಸಿದ ಆರೋಪಿ, ನಂಬರ್ ಪ್ಲೇಟ್ ಕೊಡುತ್ತೇನೆ ಎಷ್ಟು ಬೇಕಾದರೂ ಪ್ರಕರಣ ಹಾಕು ಎಂದು, ಮೊಬೈಲ್ ಕಸಿದುು ಪರಾರಿಯಾಗಲು ಯತ್ನಿಸಿದ್ದಾನೆ.
ಕೂಡಲೇ ಸಿದ್ರಾಮೇಶ್ವರ ಆರೋಪಿಯ ಬೆನ್ನು ಹತ್ತಿ ಹಿಡಿದುಕೊಂಡಿದ್ದಾರೆ. ಅದಕ್ಕೆ ಇನ್ನಷ್ಟು ಕೋಪಗೊಂಡ ಆರೋಪಿ, ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾನೆ. ಅದನ್ನು ಪ್ರಶ್ನಿಸಿದಕ್ಕೆ ಸಿದ್ರಾಮೇಶ್ವರ ಜತೆ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಜಂಕ್ಷನ್‌ಗಳಲ್ಲಿ ಸಂಚಾರ ಪೊಲೀಸರು ಬಳಸುವ ಕಿಯಾಸ್ಕ್ ಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಜತೆಗೆ ಸಿದ್ರಾಮೇಶ್ವರ ಅವರ ಕೈ ಬೆರಳುಗಳಿಗೆ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದಾನೆ.