Advertisement

ರಾಜಧಾನಿಯಲ್ಲಿ ಗುರುವಾರವೂ ಗುಡುಗಿ ಬೆದರಿಸಿದ ಮಳೆ

11:00 AM Sep 08, 2017 | Team Udayavani |

ಬೆಂಗಳೂರು: ನಗರದಲ್ಲಿ ಗುರುವಾರ ಕೂಡ ಮಳೆ ಅಬ್ಬರ ಮುಂದುವರಿದಿದ್ದು, ಸಂಜೆ ಸುರಿದ ಧಾರಾಕಾರ ಮಳೆ ಮತ್ತೆ ನಗರ ನಿವಾಸಿಗಳನ್ನು ಕಂಗಾಲಾಗಿಸಿದೆ. ಸುಮಾರು ಒಂದು ತಾಸು ಎಡಬಿಡದೆ ಸುರಿದ ಮಳೆಗೆ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು, ಅಂಡರ್‌ಪಾಸ್‌ ಜಲಾವೃತಗೊಂಡವು.

Advertisement

ಕೆಲಸ ಮುಗಿಸಿಕೊಂಡು ರಸ್ತೆಗಿಳಿಯುವ ಹೊತ್ತಿಗೇ ಮಳೆ ಬಿದ್ದಿದ್ದರಿಂದ ಇದರ ಬಿಸಿ ಹೆಚ್ಚು ಜನರಿಗೆ ತಟ್ಟಿತು. ಓಕಳೀಪುರ, ಕೆ.ಆರ್‌.ವೃತ್ತ, ಕಾರ್ಪೊರೇಷನ್‌ ವೃತ್ತ, ಡಬಲ್‌ ರೋಡ್‌ ಮತ್ತಿತರ ಕಡೆಗಳಲ್ಲಿ ಸಂಚಾರ ದಟ್ಟಣೆ ಎಂದಿಗಿಂತ ಹೆಚ್ಚಿತ್ತು. ವಾಹನ ಸವಾರರು ಮಳೆಯಲ್ಲಿ ನೆನೆದರೆ, ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಬಸ್‌ಗಳು ನಿಗದಿತ ಸ್ಥಳವನ್ನು ತಡವಾಗಿ ತಲುಪಿದವು.

ಪ್ರಯಾಣಿಕರೂ ಕಾದು ಕಾದು ಸುಸ್ತಾದರು. ಕೆಲವೆಡೆ ರಸ್ತೆಗಳೆಲ್ಲಾ ಗುಂಡಿ ಬಿದ್ದುದರಿಂದ ವಾಹನ ಸವಾರರು ಸರ್ಕಸ್‌ ಮಾಡಬೇಕಾಯಿತು. ನಗರದಲ್ಲಿ ಗರಿಷ್ಠ 34.5 ಮಿ.ಮೀ. ಮಳೆ ದಾಖಲಾಗಿತ್ತು. ತಾಸಿನಲ್ಲಿ ಮಳೆ ಇಳಿಮುಖವಾಗಿದ್ದರಿಂದ ಅಷ್ಟಾಗಿ ಸಮಸ್ಯೆ ಆಗಲಿಲ್ಲ.  ಜೂನ್‌ 1ರಿಂದ ಇದುವರೆಗೆ ನಗರದಲ್ಲಿ 644 ಮಿ.ಮೀ. ಮಳೆ ದಾಖಲಾಗಿದೆ.

ಇದು ವಾಡಿಕೆಗಿಂತ 273 ಮಿ.ಮೀ. ಹೆಚ್ಚು. ಅದೇ ರೀತಿ, ಎಚ್‌ಎಎಲ್‌ ವಿಮಾನ ನಿಲ್ದಾಣ ಸುತ್ತಮುತ್ತ ಕೂಡ ವಾಡಿಕೆಗಿಂತ 289 ಮಿ.ಮೀ.ನಷ್ಟು ಹೆಚ್ಚು ಮಳೆ ದಾಖಲಾಗಿದೆ. ಆ ಭಾಗದಲ್ಲಿ ಗುರುವಾರದವರೆಗೆ 608 ಮಿ.ಮೀ. ಮಳೆಯಾಗಿದೆ.  ಸೆಪ್ಟೆಂಬರ್‌ ಸಾಮಾನ್ಯವಾಗಿ ಹೆಚ್ಚು ಮಳೆಯಾಗುತ್ತದೆ. ಒಟ್ಟಾರೆ ನಾಲ್ಕು ತಿಂಗಳ ಮುಂಗಾರಿನಲ್ಲಿ 550 ಮಿ.ಮೀ. ವಾಡಿಕೆ ಮಳೆ ಬೀಳುತ್ತದೆ.

ಈ ಪೈಕಿ ಸೆಪ್ಟೆಂಬರ್‌ನಲ್ಲಿ 211.5 ಮಿ.ಮೀ. ಮಳೆ ಆಗುತ್ತದೆ. ಇದರಲ್ಲಿ ಈಗಾಗಲೇ ನಗರದಲ್ಲಿ 208.3 ಮಿ.ಮೀ. ಬಿದ್ದಿದೆ. 1986ರ ಸೆ.ನಲ್ಲಿ ದಾಖಲಾದ 516.6 ಮಿ.ಮೀ. ಮಳೆ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಇದಾದ ನಂತರ 2013ರಲ್ಲಿ 352.6 ಹಾಗೂ 2014ರಲ್ಲಿ 319 ಹಾಗೂ 2007ರಲ್ಲಿ 271.4 ಮಿ.ಮೀ. ಮಳೆ ದಾಖಲಾಗಿದೆ.

Advertisement

ಈ ಮಧ್ಯೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ ನಗರದ ವಿವಿಧೆಡೆ ಕನಿಷ್ಠ 1ರಿಂದ ಗರಿಷ್ಠ 34.5 ಮಿ.ಮೀ. ಮಳೆಯಾಗಿದೆ. ನಗರದ ದಕ್ಷಿಣ ಭಾಗದ ಚುಂಚನಕುಪ್ಪೆಯಲ್ಲಿ 34.5, ತಾವರೆಕೆರೆ 23.5, ಬಸವನಪುರ 17.5, ಚೋಳನಾಯನಹಳ್ಳಿ 13.5, ದೊಮ್ಮಸಂದ್ರ 21.5, ರಾಗೀಹಳ್ಳಿ 9, ಎಚ್‌ಬಿಆರ್‌ 6, ರಾಜಾನುಕುಂಟೆ 3 ಮಿ.ಮೀ. ಮಳೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಇನ್ನೂ ಎರಡು ದಿನ ಮಳೆ?
ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ. ಮೇಲ್ಮೆ„ ಸುಳಿಗಾಳಿ ಇರುವುದರಿಂದ ಮಳೆಯಾಗುತ್ತಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಹಾವೇರಿ, ಧಾರವಾಡದಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ನಿರೀಕ್ಷೆ ಇದೆ ಎಂದು ಇಲಾಖೆ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next