Advertisement

ಹಳ್ಳಿಗಳ ವಿನಾಶದಿಂದ ದೇಶದ ಅಸ್ಮಿತೆಗೆ ಧಕ್ಕೆ: ಚುಕ್ಕಿ

12:07 PM Dec 02, 2018 | |

ಬಸವಕಲ್ಯಾಣ: ಹಳ್ಳಿಯ ಸ್ಥಿತಿ ಚೆನ್ನಾಗಿಲ್ಲ ಎಂದರೆ ದೇಶದ ಸ್ಥಿತಿಯೂ ಚೆನ್ನಾಗಿರುವುದಿಲ್ಲ. ಹಳ್ಳಿಗಳ ವಿನಾಶದಿಂದ ಭಾರತದ ಅಸ್ಮಿತೆಗೆ ಧಕ್ಕೆ ಬಂದಿದೆ ಎಂದು ರೈತ ಚಳುವಳಿಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು. ನಗರದ ಬಸವಕಲ್ಯಾಣ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಡಾ| ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ 34ನೇ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ “ರೈತರು, ಜಾಗತಿಕರಣ ಹಾಗೂ ಸಾಂಸ್ಕೃತಿಕ ರಾಜಕಾರಣ’ ಕುರಿತು ಅವರು ಉಪನ್ಯಾಸ ನೀಡಿದರು.

Advertisement

ಹಳ್ಳಿ ಎಂದರೆ ಕೃಷಿ, ಕೃಷಿ ಸುತ್ತ ವೈವಿಧ್ಯಮಯ ಸಂಸ್ಕೃತಿ ಇದೆ. ಹಳ್ಳಿಯ ಜನ ಗುಳೆ ಹೋಗುವ ಮೂಲಕ ಸಾಂಸ್ಕೃತಿಕ ವೈವಿಧ್ಯತೆಗೆ ಅಪಾಯ ಒದಗಿದೆ. ಹಳ್ಳಿಯ ಜನ ಮಹಾನಗರಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಅಲ್ಲಿ ಹೊಟ್ಟೆ ಪಾಡೇ ಮುಖ್ಯವಾಗುತ್ತದೆ. ಅಸ್ಮಿತೆ ಮುಖ್ಯವಾಗುವುದಿಲ್ಲ ಎಂದರು. 

ಶಿಕ್ಷಣ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಕೃಷಿಯಿಂದ ಯುವಕರನ್ನು ಎಷ್ಟು ದೂರವಿಡಬೇಕೋ ಅಷ್ಟು ದೂರವಿಡುತ್ತಿದೆ. ಯುವಕರು ರೈತ ಚಳವಳಿಗೆ ಬರುತ್ತಿಲ್ಲ. ತಾಂತ್ರಿಕ ಶಿಕ್ಷಣ, ನಿರ್ವಹಣಾ ಶಿಕ್ಷಣಗಳು ಯುವಕರನ್ನು ಸ್ವಾಭಿಮಾನ, ಅಸ್ಮಿತೆ ಮರೆಸಿ ಗುಲಾಮರನ್ನಾಗಿಸುತ್ತಿವೆ ಎಂದರು.

ಈ ದೇಶದ ರೈತರಿಗೆ ಆರ್ಥಿಕ, ಸಾಮಾಜಿಕ, ಭದ್ರತೆಗಳಿಲ್ಲ. ಅನ್ನ ಕೊಡುವವನಿಗೆ ಆಹಾರ ಸಾರ್ವಭೌಮತ್ವವಿಲ್ಲ. ರಾಜಕಾರಣಿಗಳು ರೈತರ ಕುರಿತು ಉಡಾಫೆಯಾಗಿ ಮಾತನಾಡುವುದು ದುರಂತದ ಸಂಗತಿಯಾಗಿದೆ. ರೈತರ ಆತ್ಮಹತ್ಯೆ ಭಾರತದಲ್ಲಷ್ಟೆ ಇಲ್ಲ. ವಿಶ್ವದ ತುಂಬೆಲ್ಲಾ ಇದೆ ಎಂದರು.

ರೈತರ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಸೌಕರ್ಯ ಮಾಡಿಕೊಡಬೇಕು. ರೈತರ ಮಕ್ಕಳ ಭವಿಷ್ಯ ಚೆನ್ನಾಗಿ ರೂಪಿಸುವ ನೀತಿಗಳು ಬರಬೇಕು. ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು ಎಂದರು.

Advertisement

ಕೃಷಿ ಮಾತ್ರ ನಿಸರ್ಗದ ಜತೆ ಆಪ್ತವಾದ ಸಂಬಂಧ ಹೊಂದಿದ ಉದ್ಯೋಗವಾಗಿದೆ. ನಿಸರ್ಗದೊಂದಿಗೆ ಸಂಬಂಧವಿಲ್ಲದ ಕೆಲಸದ ಕಡೆ ಯುವಕರನ್ನು ಬಂಡವಾಳ ಶಾಹಿಗಳು ಕರೆದೊಯ್ಯುತ್ತಿದ್ದಾರೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಬಿಕೆಇಸಿ ಪ್ರಾಚಾರ್ಯ ಡಾ| ಎಸ್‌.ಬಿ.ಕಿವಡೆ ಮಾತನಾಡಿ, ವ್ಯವಸ್ಥೆಯ ಲೋಪ ದೋಷಗಳ ಕಡೆಗಣನೆಯಿಂದ ರೈತ ಶೋಷಣೆಗಳಿಗೆ ಒಳಗಾಗುತ್ತಿದ್ದಾನೆ. ವ್ಯವಸ್ಥೆಯ ಅಂಕು ಡೊಂಕು ತಿದ್ದಲು ಚಳವಳಿಗಳು ದಾರಿಯಾಗಿವೆ. ಆದ್ದರಿಂದ ಪ್ರಜ್ಞಾ ಸ್ಥಿತಿಯ ಅಗತ್ಯವಿದೆ ಎಂದರು.

ಪ್ರತಿಷ್ಠಾನದ ನಿರ್ದೇಶಕ ಡಾ| ಭೀಮಾಶಂಕರ ಬಿರಾದಾರ ಮಾತನಾಡಿ, ಕೃಷಿಯೂ ಜಾಗತಿಕರಣ ರೈತರ ಆತ್ಮಹತ್ಯೆ, ಉತ್ಪನ್ನಕ್ಕೆ ನಿಗದಿತ ನ್ಯಾಯ ಬೇಲೆ ಇಲ್ಲದೆ ಇರುವಂತಹ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಶೋಷಣೆಗೆ ಒಳಗಾಗಿ ಕೃಷಿಕನ ಸ್ಥಿತಿಯೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ ಎಂದರು. ಚಂದ್ರಶೇಖರ ಜಮಖಂಡಿ, ಸುಭಾಷ ರಗಟೆ, ಖಾನಸಾಬ್‌ ಪಠಾಣ, ಸಿದ್ರಾಮ ಬಾಲಕುಂದೆ, ಸಿದ್ದಣ್ಣ ಭೂಶೆಟ್ಟಿ, ಉಪನ್ಯಾಸಕರಾದ ರೇವಣಸಿದಪ್ಪ ದೊರೆಗಳು, ಡಾ|ಅರುಣಕುಮಾರ ಯಲಾಲ್‌ ದಯಾನಂದ ಶೀಲವಂತ, ಶರಣಬಸಪ್ಪ ಸಾಲಿ, ಸಂತೋಷ ಪಾಟೀಲ ಇದ್ದರು. ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಸಿದರು. ಪ್ರೇಮಸಾಗರ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next