Advertisement
ಅಂದು ಗಲಭೆ ನಡೆಯುತ್ತಿದ್ದ ಸ್ಥಳಕ್ಕೆ ಕರ್ತವ್ಯಕ್ಕೆಂದು ತೆರಳುತ್ತಿದ್ದ ಇಬ್ಬರು ಕಾನ್ಸ್ಟೇಬಲ್ ಗಳಿಗೆ ನೂರಾರು ಜನರಿದ್ದ ಕಿಡಿಗೇಡಿಗಳ ಗುಂಪು ಅಡ್ಡಗಟ್ಟಿ ನಿಲ್ಲಿಸಿದ್ದಲ್ಲದೆ, ಅವರ ಕೊಲೆಗೆ ಯತ್ನಿಸಿದ್ದಾರೆ. ಆಗ ಸ್ವಲ್ಪದರಲ್ಲಿಯೇ ಇವರಿಬ್ಬರು ಬಚಾವ್ ಆಗಿ ತಮ್ಮ ಜೀವ ರಕ್ಷಿಸಿಕೊಂಡಿದ್ದಾರೆ.
Related Articles
Advertisement
ಸ್ಟೇಟಸ್ ಹಾಕಿದ್ದ ಯುವಕನಿಗೆ ಪರೀಕ್ಷೆ ಬರೆಯಲು ಅವಕಾಶ: ವಾಟ್ಸ್‌ಆ್ಯಪ್‌ನಲ್ಲಿ ವಿವಾದಾತ್ಮಕ ಸ್ಟೇಟಸ್ ಹಾಕಿ ಬಂಧಿತನಾಗಿರುವ ಇಲ್ಲಿನ ಆನಂದನಗರ ನಿವಾಸಿ ಅಭಿಷೇಕ ಹಿರೇಮಠಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆದರೆ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅಭಿಷೇಕ ವಿವಾದಾತ್ಮಕ ಸ್ಟೇಟಸ್ ಹಾಕಿದ ಆರೋಪದಡಿ ಏ.16ರಂದು ಬಂಧಿತನಾಗಿದ್ದ. ಈತನಿಗೆ ಏ.22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇದೆ. ಕಾರಣ ಅದಕ್ಕೆ ಅನುವು ಮಾಡಿಕೊಡಿ. ಇಲ್ಲವೇ ಕೂಡಲೇ ಜಾಮೀನು ನೀಡಿ ಎಂದು ವಕೀಲ ಸಂಜೀವ ಬಡಸ್ಕರ ಅವರು 4ನೇ ಅಪರ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿ ವಜಾಗೊಳಿಸಿದೆ. ಆದರೆ ಅಭಿಷೇಕನಿಗೆ ಪರೀಕ್ಷೆ ಬರೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಕಾರಾಗೃಹ ಅಧಿಕಾರಿಗಳು ಆತನಿಗೆ ಪ್ರತ್ಯೇಕ ಸೆಲ್‌ನಲ್ಲಿಟ್ಟು ಅಭ್ಯಾಸ ಮಾಡಲು ಪುಸ್ತಕ, ಮತ್ತಿತರೆ ವ್ಯವಸ್ಥೆ ಮಾಡಬೇಕು. ಪೊಲೀಸರು ಬಂದೋಬಸ್ತ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಬೇಕು ಹಾಗೂ ಆತನನ್ನು ಎಲ್ಲ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಹಾಜರುಪಡಿಸದೆ ಪ್ರತ್ಯೇಕ ಪರೀಕ್ಷಾ ಕೊಠಡಿ ಸೌಲಭ್ಯ ಕಲ್ಪಿಸಿ ಬಂದೋಬಸ್ತ್ ನಲ್ಲಿಯೇ ಪರೀಕ್ಷೆ ಬರೆಯಿಸಬೇಕು ಎಂದು ಪೊಲೀಸರಿಗೆ ಸೂಚಿಸಿದೆ.
ಮೌಲ್ವಿ ಅಲ್ಲ ಲಾರಿ ಚಾಲಕ: ಗಲಭೆಗೆ ಪ್ರಚೋದನೆ ನೀಡಿದ ಇಲ್ಲಿನ ಮಂಟೂರ ರಸ್ತೆಯ ಮಿಲ್ಲತ್ ನಗರ ನಿವಾಸಿ ಮೌಲ್ವಿ ಅಲ್ಲ, ಲಾರಿ ಚಾಲಕನಾಗಿದ್ದಾನೆ. ಈ ಹಿಂದೆ ಲಾರಿ ಚಾಲಕನಾಗಿದ್ದ ಈತ ಇತ್ತೀಚೆಗೆ ಮೌಲ್ವಿ ತರಹ ಬಟ್ಟೆ ಹಾಕಿಕೊಂಡು ಓಡಾಡುತಿದ್ದ. ಅಲ್ಲದೇ ತನ್ನದೇ ಆದ ಬೆಂಬಲಿಗರ ಗುಂಪು ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ.
ಹೈದರಾಬಾದ್‌ಗೆ ತೆರಳಿದ ತಂಡ: ಶನಿವಾರ ರಾತ್ರಿ ಗಲಭೆಗೆ ಪ್ರಚೋದನೆ ನೀಡಿದ ಮಂಟೂರ ರಸ್ತೆ ಮಿಲ್ಲತ್ ನಗರದ ಮೌಲ್ವಿ ತಲೆಮರೆಸಿಕೊಂಡು ಹೈದರಾಬಾದ್‌ನಲ್ಲಿ ಇದ್ದಾನೆಂಬ ಮಾಹಿತಿ ಮೇರೆಗೆ ತನಿಖಾ ತಂಡದ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿಯೊಂದಿಗೆ ಆತನ ಪತ್ತೆಗಾಗಿ ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೆ 12 ಮಂದಿ ವಶಕ್ಕೆ: ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ 12 ಜನ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನೆಗೆ ಸಂಬಂ ಧಿಸಿ ಪೊಲೀಸರು ಇದುವರೆಗೆ ಒಟ್ಟು 115 ಜನರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅವರಲ್ಲಿ 103 ಜನರನ್ನು ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಇನ್ನುಳಿದವರನ್ನು ಧಾರವಾಡದ ಕೇಂದ್ರ ಕಾರಾಗೃಹದಲ್ಲಿರಿಸಿದ್ದಾರೆ.