ಬೆಂಗಳೂರು: ಮನೆಗೆ ಹೋಗುವಂತೆ ಸೂಚಿಸಿದ್ದಕ್ಕೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಯುವಕನೊಬ್ಬ ನಿಂದಿಸಿದ್ದು, ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರಮಂಗಲ ನಿವಾಸಿ ಸುನೀಲ್ ಆರೋಪಿ.
ಬಂಡೆಪಾಳ್ಯ ಠಾಣಾ ಹೊಯ್ಸಳ ಪೊಲೀಸ್ ಸಿಬ್ಬಂದಿ ಆ.17ರಂದು ರಾತ್ರಿ 1 ಗಂಟೆ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದರು. ಎಸ್.ವಿ.ಲೇಕ್ ವ್ಯೂ ಅಪಾಟ್ ìಮೆಂಟ್ ಆವರಣದಲ್ಲಿರುವ ಪಾರ್ಟಿ ಹಾಲ್ ಮೆಟ್ಟಿಲುಗಳ ಮೇಲೆ ಆರೋಪಿ ಸುನೀಲ್, ಆತನ ಸ್ನೇಹಿತ ಹಾಗೂ ಓರ್ವ ಮಹಿಳೆ ಕುಳಿತಿರುವುದನ್ನು ಗಮನಿಸಿದ್ದರು. ರಾತ್ರಿಯಾಗಿರುವುದರಿಂದ ವಿರಳ ಸಂಚಾರವಿದ್ದ ಕಾರಣ ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಹೋಗುವಂತೆ ಮೈಕ್ ಮೂಲಕ ಹೊಯ್ಸಳ ಸಿಬ್ಬಂದಿ ಹೇಳಿದ್ದಾರೆ.
ಈ ವೇಳೆ ಸುನೀಲ್ ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಏಕವಚನದಲ್ಲಿ ನಿಂದಿಸಿದ್ದ. “ನನಗೆ ಹಿರಿಯ ಅಧಿಕಾರಿಗಳ ಪರಿಚಯವಿದೆ’ ಎಂದು ಧಮ್ಕಿ ಹಾಕಿದ್ದ. ಹೊಯ್ಸಳ ವಾಹನವನ್ನು ಹೋಗಲು ಬಿಡದೆ ಕಿರಿಕ್ ಮಾಡಿದ್ದ. ಆರೋಪಿಯನ್ನು ಹೊಯ್ಸಳ ವಾಹನ ಹತ್ತಿಸಲು ಹೋದಾಗ ಪೊಲೀಸರನ್ನೇ ತಳ್ಳಾಡಿ ತಪ್ಪಿಸಿಕೊಂಡು ಹೋಗಿದ್ದ ಎಂದು ತಿಳಿದು ಬಂದಿದೆ.