ಹೊಸದಿಲ್ಲಿ: “ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಮ್ಮ ಲೋಕಸಭೆಯ ಲಾಗ್‌ಇನ್ ಐಡಿ, ಪಾಸ್‌ವರ್ಡ್ ಅನ್ನು ಉದ್ಯಮಿ ದರ್ಶನ್ ಹಿರಾನಂದಾನಿ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದ್ದಾರೆ. ಇದೊಂದು ಗಂಭೀರ ಅಪರಾಧ’.
ಗುರುವಾರ ಮಹುವಾ ಅವರನ್ನು ಲೋಕ ಸಭೆಯ ಮುಂದಿನ ಅವಧಿಗೆ ಉಚ್ಚಾಟನೆ ಮಾಡುವಂತೆ ಶಿಫಾರಸು ಮಾಡುವ ವೇಳೆ ಲೋಕಸಭೆಯ ಎಥಿಕ್ಸ್ ಕಮಿಟಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಉದ್ಯಮಿ ಹಿರಾನಂದಾನಿ ಅವರು ದುಬಾೖ ನಿವಾಸಿಯಾಗಿದ್ದು, ಅವರ ಹತ್ತಿರದ ಸಂಬಂಧಿಕರು ಕೂಡ ವಿದೇಶಿ ಪ್ರಜೆಗಳಾಗಿದ್ದಾರೆ. ಹೀಗಾಗಿ ಅವರೊಂದಿಗೆ ಗುಪ್ತ ಮಾಹಿತಿ ಹಂಚಿ ಕೊಂಡಿರುವ ಕಾರಣ, ವಿದೇಶಿ ಸಂಸ್ಥೆ ಗಳಿಗೆ ನಮ್ಮ ದೇಶದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇಲ್ಲದಿಲ್ಲ.
ಮಹುವಾ ಅವರ ಪೋರ್ಟಲ್ ಅನ್ನು 2019ರ ಜುಲೈಯಿಂದ 2023ರ ಎಪ್ರಿಲ್‌ವರೆಗೆ ದುಬಾೖನಲ್ಲಿದ್ದುಕೊಂಡೇ 47 ಬಾರಿ ಆಪರೇಟ್ ಮಾಡಲಾಗಿದೆ. ಇದರಿಂದ ಲೋಕಸಭೆಯ ಸಿಸ್ಟಂಗಳು ಸೈಬರ್ ದಾಳಿಗೆ ತುತ್ತಾಗುವ, ಇಡೀ ವ್ಯವಸ್ಥೆಯೇ ಕಾರ್ಯ ಸ್ಥಗಿತಗೊಳ್ಳುವ, ಭಾರತದ ಸಂಸತ್‌ನ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಸಾಧ್ಯತೆಯೂ ಇತ್ತು ಎಂದು ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಎಥಿಕ್ಸ್ ಕಮಿಟಿ ತನ್ನ ವರದಿಯಲ್ಲಿ ಉಲ್ಲೇಖೀಸಿದೆ.
ಲೋಕಸಭೆಯ ಪೋರ್ಟಲ್‌ನಲ್ಲಿ ಹಲವಾರು ಕಡತಗಳಿರುತ್ತವೆ. ಕರಡು ಮಸೂದೆಗಳನ್ನೂ ಅಪ್‌ಲೋಡ್ ಮಾಡಲಾಗಿರುತ್ತದೆ. ತ್ರಿವಳಿ ತಲಾಖ್ ನಿಷೇಧ, ದಿವಾಳಿತನ ಸಂಹಿತೆ ಸೇರಿದಂತೆ 20ರಷ್ಟು ಮಸೂದೆಗಳು ಇದರಲ್ಲಿವೆ. ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡಣೆ ಮಸೂದೆ 2019 ಅನ್ನು ಕೂಡ ಮುಂಚಿತ ವಾಗಿಯೇ ಇಲ್ಲಿ ಸಂಸದರೊಂದಿಗೆ ಹಂಚಿಕೊಳ್ಳಲಾಗಿತ್ತು. ಇಂಥ ಪ್ರಮುಖ ಕಡತಗಳನ್ನು ವಿದೇಶಿ ಶಕ್ತಿಗಳು ದುರ್ಬಳಕೆ ಮಾಡಿಕೊಂಡಿದ್ದರೆ, ದೇಶದ ಭದ್ರತೆಗೆ ಅಪಾಯ ಉಂಟಾಗುತ್ತಿತ್ತು ಎಂದೂ ವರದಿ ಕಳವಳ ವ್ಯಕ್ತಪಡಿಸಿದೆ. ಆದರೆ, ಮಹುವಾ ಅವರು ಉದ್ಯಮಿಯಿಂದ ಹಣ ಪಡೆದಿರುವುದಕ್ಕೆ ಪೂರಕ ಸಾಕ್ಷ್ಯಗಳು ಇಲ್ಲ ಎಂದೂ ಹೇಳಿದೆ.