ಗಡ್ ಚಿರೋಲಿ(ಮಹಾರಾಷ್ಟ್ರ): ಮಹಾರಾಷ್ಟ್ರದ ವಿದರ್ಭ ಪ್ರದೇಶ ಮತ್ತು ಚಂದ್ರಾಪುರ್ ಜಿಲ್ಲೆಯಲ್ಲಿ 13 ಜನರ ಸಾವಿಗೆ ಕಾರಣವಾಗಿದ್ದ “ಅಪಾಯಕಾರಿ ನರಭಕ್ಷಕ ಸಿಟಿ-1 ಹುಲಿಯನ್ನು” ಮಹಾರಾಷ್ಟ್ರ ಅರಣ್ಯ ಇಲಾಖೆ ಶಾಂತಗೊಳಿಸುವ ಅರಿವಳಿಕೆ ನೀಡಿ ಗುರುವಾರ (ಅಕ್ಟೋಬರ್ 13) ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಗೋವಾದಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ : ತುರ್ತು ಭೂಸ್ಪರ್ಶ
ಮನುಷ್ಯರ ಜೀವಕ್ಕೆ ಅಪಾಕಾರಿಯಾಗಿದ್ದ ಈ ಹುಲಿ ಗಡ್ ಚಿರೋಲಿಯ ವಾಡ್ಸಾ ಅರಣ್ಯ ಪ್ರದೇಶದತ್ತ ತೆರಳುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ನರಭಕ್ಷಕ ಹುಲಿ ವಾಡ್ಸಾ ಪ್ರದೇಶದಲ್ಲಿ ಆರು ಮಂದಿ, ಭಂದಾರದಲ್ಲಿ ನಾಲ್ವರು ಹಾಗೂ ಬ್ರಹ್ಮಪುರಿ ಅರಣ್ಯ ಪ್ರದೇಶದಲ್ಲಿ ಮೂವರನ್ನು ಕೊಂದು ಹಾಕಿತ್ತು.
ಅಕ್ಟೋಬರ್ 4ರಂದು ಅಧಿಕಾರಿಗಳ ಸಭೆ ನಡೆಸಿದ್ದ ನಾಗ್ಪುರ್ ವನ್ಯಜೀವಿ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅಪಾಯಕಾರಿ ಸಿಟಿ-1 ಹುಲಿಯನ್ನು ಸೆರೆಹಿಡಿಯುವಂತೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.
ಈ ಅಪಾಯಕಾರಿ ಹುಲಿಯನ್ನು ಯುದ್ಧೋಪಾದಿಯಲ್ಲಿ ಸೆರೆ ಹಿಡಿಯಲು ಟಡೋಬಾ ಹುಲಿ ರಕ್ಷಣಾ ತಂಡ, ಚಂದ್ರಾಪುರ್ ನ ರಾಪಿಡ್ ರೆಸ್ಪಾನ್ಸ್ ತಂಡ ಹಾಗೂ ಇತರ ಸಿಬಂದಿಗಳು ಶ್ರಮಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿಯ ಪುನರ್ ವಸತಿಗಾಗಿ ಗಡ್ ಚಿರೋಲಿಯಿಂದ 183 ಕಿಲೋ ಮೀಟರ್ ದೂರದಲ್ಲಿರುವ ನಾಗ್ಪುರದ ಗೋರೆವಾಡಾ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.