Advertisement

G20 Summit ಬೆದರಿಕೆ, ದೇಶದ್ರೋಹಿಗಳ ವಿರುದ್ಧ ಕ್ರಮ ಅನಿವಾರ್ಯ

12:58 AM Sep 05, 2023 | Team Udayavani |

ಇದೇ ತಿಂಗಳ 9 ಮತ್ತು 10ರಂದು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಜಗತ್ತಿನ ಬಹುತೇಕ ಪ್ರಮುಖ ನಾಯಕರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಚೀನ ಪ್ರಧಾನಿ ಲೀ ಕಿಯಾಂಗ್‌ ಸೇರಿದಂತೆ ಫ್ರಾನ್ಸ್‌, ಕೆನಡಾ, ಇಟಲಿ, ಜಪಾನ್‌, ಜರ್ಮನಿ ಹಾಗೂ ಇತರ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳ ಪ್ರಮುಖರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಹೈಪ್ರೊಫೈಲ್‌ ಶೃಂಗಸಭೆಯಾಗಿದ್ದು, ಕೇಂದ್ರ ಸರಕಾರವೂ ಎಲ್ಲ ರೀತಿಯ ಭದ್ರತೆ ವ್ಯವಸ್ಥೆ ಮಾಡಿದೆ. ಇದಕ್ಕಾಗಿಯೇ ಭಾರತ ಮಂಟಪಂ ಎಂಬ ಹೊಸ ಭವನವನ್ನೇ ಕಟ್ಟಲಾಗಿದ್ದು, ಇದರಲ್ಲಿ ಎರಡು ದಿನಗಳ ಕಾಲ ಸಭೆ ನಡೆಯಲಿದೆ. ಹಾಗೆಯೇ ಭಾರತ ಹಲವಾರು ದೇಶಗಳ ಜತೆಗೆ ದ್ವಿಪಕ್ಷೀಯ ಸಂಬಂಧ ಮಾತುಕತೆ ನಡೆಸುವ ಸಾಧ್ಯತೆಗಳೂ ಇವೆ.

Advertisement

ಕಳೆದ ಒಂದು ವರ್ಷದಿಂದಲೂ ಭಾರತ ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು, ಶ್ರೀನಗರವೂ ಸೇರಿದಂತೆ ದೇಶದ ವಿವಿಧೆಡೆ ನಾನಾ ಜಿ20 ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಕರ್ನಾಟಕದ ಹಂಪಿಯಲ್ಲಿ ಪ್ರವಾಸೋದ್ಯಮ ಸಂಬಂಧ ಜಿ20 ಪ್ರತಿನಿಧಿಗಳ ಸಭೆ ನಡೆದಿದೆ. ಅದರಲ್ಲಿಯೂ ಶ್ರೀನಗರದಲ್ಲಿ ಯಶಸ್ವಿಯಾಗಿ ಸಭೆ ನಡೆಸಿದ್ದು, ನೆರೆಯ ಚೀನ ಮತ್ತು ಪಾಕಿಸ್ಥಾನಕ್ಕೆ ಭಾರೀ ಇರುಸು ಮುರುಸಿಗೂ ಕಾರಣವಾಗಿದೆ. ಚೀನ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.

ಸೆ.8ರಿಂದಲೇ ಹೊಸದಿಲ್ಲಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿದಂತೆ ನಾನಾ ದೇಶಗಳ ಪ್ರಮುಖ ನಾಯಕರು ಬಹುತೇಕ ಸೆ.8ರಂದೇ ಆಗಮಿಸಲಿದ್ದಾರೆ. ಇವರೆಲ್ಲರಿಗೂ ಭಾರತ ಅತಿಥಿ ದೇವೋಭವದ ಅಡಿಯಲ್ಲಿ ಸತ್ಕರಿಸಲಿದೆ. ಸೆ.9 ಮತ್ತು 10ರಂದು ಜಗತ್ತಿನ ನಾನಾ ವಿಚಾರಗಳು ಸೇರಿದಂತೆ ಪ್ರಸ್ತುತದ ಸಮಸ್ಯೆಗಳ ಬಗ್ಗೆ ಜಿ20 ದೇಶಗಳು ಬೆಳಕು ಚೆಲ್ಲಲಿವೆ.

ಈ ಶೃಂಗಸಭೆಯನ್ನು ಯಶಸ್ವಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಭಾರತ ತನ್ನೆಲ್ಲ ಶಕ್ತಿ ಬಳಸಿಕೊಂಡು ಪ್ರಯತ್ನ ಮಾಡುತ್ತಿದ್ದರೆ, ಮತ್ತೂಂದೆಡೆ, ಭಾರತ ವಿದ್ರೋಹಿ ಶಕ್ತಿಗಳು ಈ ಶೃಂಗಸಭೆಯನ್ನು ಹಾಳು ಮಾಡಲು ಮುಂದಾಗಿವೆ. ಈಗಾಗಲೇ ದಿಲ್ಲಿಯ ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ಥಾನಿ ಬರಹಗಳನ್ನು ಹಾಕುವ ಮೂಲಕ ದೇಶವಿರೋಧಿತನವನ್ನು ತೋರಿಸಲಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ, ಕೆನಡಾದಲ್ಲಿ ಅವಿತುಕೊಂಡಿರುವ ಖಲಿಸ್ಥಾನಿ ನಾಯಕ ಗುರುಪಂತ್‌ಸಿಂಗ್‌ ಪನ್ನು ಎಂಬಾತ ಜಿ20 ಶೃಂಗವನ್ನು ವಿಫ‌ಲಗೊಳಿಸುವಂತೆ ಕರೆ ನೀಡಿದ್ದಾನೆ. ಅದರಲ್ಲೂ ಕಾಶ್ಮೀರಿ ಮುಸ್ಲಿಮರೆಲ್ಲರೂ ಅಂದು ದಿಲ್ಲಿಗೆ ಬಂದು ಪ್ರತಿಭಟನೆ ಮಾಡಬೇಕು. ಈ ಮೂಲಕ ಶೃಂಗಸಭೆಯನ್ನು ಹಾಳು ಮಾಡಬೇಕು ಎಂದು ಹೇಳಿದ್ದಾನೆ. ಈ ಸಂಬಂಧ ಆಡಿಯೋ ಸಂದೇಶವೊಂದನ್ನು ಹಾಕಿರುವ ಆತ, ಪಂಜಾಬ್‌ ಅನ್ನು ಭಾರತದಿಂದ ಮುಕ್ತಗೊಳಿಸುವುದೇ ನನ್ನ ಗುರಿ. ಈ ನಿಟ್ಟಿನಲ್ಲಿ ಜಿ20 ಸಭೆ ವಿಫ‌ಲ ಮಾಡಬೇಕು ಎಂಬ ಮಾತುಗಳನ್ನು ಆಡಿದ್ದಾನೆ. ಹೀಗಾಗಿ ಕೇಂದ್ರದ ಭದ್ರತಾ ಪಡೆಗಳು ಯಾವುದೇ ಕಾರಣಕ್ಕೂ ಈ ಆಡಿಯೋ ಸಂದೇಶವನ್ನು ಲಘುವಾಗಿ ಪರಿಗಣಿಸಬಾರದು. ಭಾರತಕ್ಕೆ ಕೆಟ್ಟ ಹೆಸರು ತರಲೆಂದೇ ಇಂಥ ವಿದ್ರೋಹಿ ಶಕ್ತಿಗಳು ಕಾಯುತ್ತಾ ಕುಳಿತಿರುತ್ತವೆ. ಭದ್ರತಾ ಪಡೆಗಳು ಇವರ ಮೇಲೆ ನಿಗಾ ಇರಿಸಿ, ದಿಲ್ಲಿಗೆ ನುಸುಳದಂತೆ ನೋಡಿಕೊಳ್ಳಬೇಕು. ಸಾಧ್ಯವಾದರೆ, ಈತನಿಗೆ ಆಶ್ರಯ ನೀಡಿರುವ ಕೆನಡಾ ಸರಕಾರದ ಜತೆ ಮಾತುಕತೆ ನಡೆಸಿ, ಈತನ ಬಾಲ ಕತ್ತರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next