ಟೆಲ್ ಅವಿವ್: ಇಸ್ರೇಲ್-ಹಮಾಸ್ ಯುದ್ಧ ಆರಂಭವಾಗಿ 10 ದಿನಗಳು ಪೂರ್ಣಗೊಂಡಿದ್ದು, ಗಾಜಾಪಟ್ಟಿಯ ಮೇಲೆ ಇಸ್ರೇಲ್ ಭೂ ಆಕ್ರಮಣ ಆರಂಭಿಸಲು ಸಜ್ಜಾಗುತ್ತಿರುವಂತೆಯೇ ಇರಾನ್ ಮಧ್ಯಪ್ರವೇಶ ಮಾಡಿದೆ. ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ನಿಲ್ಲಿಸಿ ದರೆ, ಹಮಾಸ್ ಉಗ್ರರು ಕೂಡ ಒತ್ತೆ ಯಾಳು ಗಳನ್ನು ಬಿಡುಗಡೆ ಮಾಡಲು ಸಿದ್ಧರಿದ್ದಾರೆ ಎಂದು ಸೋಮವಾರ ಇರಾನ್ ಹೇಳಿದೆ. ಈ ಮೂಲಕ ಸಂಘರ್ಷಕ್ಕೆ ಪೂರ್ಣವಿರಾಮ ಹಾಕುವ ಕುರಿತು ಮಾತನಾಡಿದೆ.
ವೈಮಾನಿಕ ದಾಳಿ ನಿಂತರೆ 200 ಒತ್ತೆಯಾಳು ಗಳನ್ನು ಹಮಾಸ್ ಬಿಡುಗಡೆ ಮಾಡಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿರು ವುದಾಗಿ ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಆದರೆ, ಹಮಾಸ್ ಉಗ್ರ ಸಂಘಟನೆ ಯು ಇಂಥ ಯಾವುದೇ ಆಫರ್ ಕೊಟ್ಟಿರುವ ಬಗ್ಗೆ ಒಪ್ಪಿಕೊಂಡಿಲ್ಲ.
ಇನ್ನೊಂದೆಡೆ, ಗಾಜಾ-ಈಜಿಪ್ಟ್ ನಡುವಿನ ರಫಾಹ್ ಬಾರ್ಡರ್ ಕ್ರಾಸಿಂಗ್ ಅನ್ನು ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ಜತೆಗೆ, ಕದನವಿರಾಮವೂ ಇಲ್ಲ ಎಂದೂ ತಿಳಿಸಿದೆ. ಇದೇ ವೇಳೆ, ಗಾಜಾದಲ್ಲಿನ ವಲಸಿಗರ ಪರ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಯ ಅಧ್ಯಕ್ಷರು ಮಾತನಾಡಿ, “ನಮಗೆ ಆಹಾರ, ನೀರು ಯಾವುದೂ ಸಿಗುತ್ತಿಲ್ಲ. ಗಾಜಾದ ಪರಿಸ್ಥಿತಿ ಶೋಚನೀಯವಾಗಿದೆ. ಜಗತ್ತು ಮಾನವೀಯತೆ ಯನ್ನೇ ಮರೆತಿದೆ. ನಾವು ಸಂಪೂರ್ಣ ಕುಸಿಯುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ವಿಪಕ್ಷ ನಾಯಕರ ಭೇಟಿ
ಈ ಎಲ್ಲ ಬೆಳವಣಿಗೆಗಳ ನಡುವೆ, ಸೋಮವಾರ ಸಂಸದ ಡ್ಯಾನಿಷ್ ಅಲಿ, ಮಾಜಿ ಸಂಸದರಾದ ಮಣಿ ಶಂಕರ್ ಅಯ್ಯರ್, ಕೆಸಿ ತ್ಯಾಗಿ ಸೇರಿದಂತೆ ವಿಪಕ್ಷಗಳ ನಾಯಕರ ಗುಂಪೊಂದು ಸೋಮವಾರ ಹೊಸದಿಲ್ಲಿಯಲ್ಲಿರುವ ಪ್ಯಾಲೆಸ್ತೀನ್ ರಾಯಭಾರ ಕಚೇರಿಗೆ ಭೇಟಿ ನೀಡಿ, ಪ್ಯಾಲೆಸ್ತೀನಿಯರ ಪರ ನಿಲ್ಲುವುದಾಗಿ ತಿಳಿಸಿದೆ.