ಕಾಬೂಲ್ : ಯುದ್ಧ ಪೀಡಿತ ಅಘ್ಪಾನಿಸ್ತಾನದ ನೆಲದಿಂದ ಇದೀಗ ಒಂದೊಂದಾಗಿ ಕರುಣಾಜನಕ ಕಥೆಗಳು ಹೊರ ಬರುತ್ತಿವೆ. ಕಳೆದ ಒಂದು ತಿಂಗಳ ಹಿಂದೆ ಸ್ವಚ್ಛಂದವಾಗಿ ಓಡಾಡುತ್ತಿದ್ದ ಅಲ್ಲಿಯ ಜನರು ಇಂದು ಖೈದಿಗಳಂತೆ ಮನೆಯಲ್ಲಿ ಕೊಳೆಯುವಂತಾಗಿದೆ. ಅದರಲ್ಲೂ ಪುರುಷರಿಲ್ಲದ ಕುಟುಂಬಗಳು ಅಕ್ಷರಶಃ ನರಕಯಾತನೆ ಅನುಭವಿಸುವಂತಾಗಿದೆ.
ಆಫ್ಘಾನಿಸ್ತಾನದ ಆಡಳಿತದ ಚುಕ್ಕಾಣಿ ತಮ್ಮ ಕೈಗೆ ತೆಗೆದುಕೊಂಡ ತಾಲಿಬಾನಿ ಉಗ್ರರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಅವರು ನೀಡುತ್ತಿರುವ ಆದೇಶಗಳು ಅಲ್ಲಿಯ ಕುಟುಂಬಗಳನ್ನು ಯಾತನೆಗೆ ದೂಡಿವೆ.
ಆಕೆಯ ಹೆಸರು ಶಬೀನಾ (ಹೆಸರು ಬದಲಿಸಲಾಗಿದೆ). 43 ವಯಸ್ಸಿನ ಈ ವಿಧವೆ ತನ್ನ 24 ಹಾಗೂ 22 ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾಳೆ. ಈ ಮೊದಲು ಕಸೂತಿ (ಎಂಬ್ರಾಯಡರ್ ) ಅಂಗಡಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ತನ್ನ ದುಡಿಮೆಯಿಂದ ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದಳು. ಆದರೆ, ಕಳೆದ 15 ದಿನಗಳಿಂದ ಈಕೆ ಮನೆಯಲ್ಲಿಯೇ ಉಳಿಯುವಂತಾಗಿದೆ. ತಾಲಿಬಾನಿಗಳು ಹೊರಡಿಸಿರುವ ಆದೇಶ ಈಕೆಗೆ ಕಂಟಕವಾಗಿದೆ. ಒಂಟಿ ಮಹಿಳೆಯರು ಹೊರಗೆ ಓಡಾಡುವಂತಿಲ್ಲ ( ಜೊತೆಯಲ್ಲಿ ಪುರುಷರು ಇರಬೇಕು) ಎನ್ನುವ ತಾಲಿಬಾನ್ ಉಗ್ರರ ಆದೇಶ ಈಕೆಯ ಕೆಲಸವನ್ನು ಕಿತ್ತುಕೊಂಡಿದೆ. ಈಕೆಯ ಮನೆಯಲ್ಲಿ ಯಾರೂ ಪುರುಷರು ಇಲ್ಲದಿರುವುದರಿಂದ ಹೊಸ್ತಿಲ ದಾಟಿ ಹೊರಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಕೆಲಸ ಇಲ್ಲದೆ ಮನೆಯಲ್ಲಿ ಉಳಿದುಕೊಂಡಿದ್ದರಿಂದ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಕಳೆದ ಒಂದು ವಾರದಿಂದ ದಿನಕ್ಕೆ ಒಂದು ಬ್ರೆಡ್ ಅಷ್ಟೇ ಸೇವಿಸಿ ಜೀವನ ದೂಡುತ್ತಿದೆ ಈ ಕುಟುಂಬ. ಸಂಗ್ರಹಿಸಿಟ್ಟ ಬ್ರೆಡ್ ಕೂಡ ಕಾಲಿಯಾಗಲು ಬಂದಿದೆ. ಮುಂದೆ ನಮ್ಮ ಗತಿ ಏನು ಎನ್ನುವ ಚಿಂತೆ ಕಾಡುತ್ತಿದೆ ಎಂದು ಕಣ್ಣೀರು ಸುರಿಸುತ್ತಿದ್ದಾರೆ ಈ ಬಡಪಾಯಿ ಮಹಿಳೆ.
ಇನ್ನು ಶಬೀನಾಳ ಕಣ್ಣೀರಿನ ಕಥೆ ಒಂದು ಕಡೆಯಾದರೆ ಗುಲಾಮ್ ಅಹ್ಮದ್ (ಹೆಸರು ಬದಲಿಸಲಾಗಿದೆ) ಅವರದು ಕರುಳು ಚುರುಕ್ ಎನ್ನುವಂತಹ ಪರಿಸ್ಥಿತಿ ಇದೆ. ಅಂಗಡಿಯೊಂದರಲ್ಲಿ ದಿನಗೂಲಿ ಕೆಲಸಗಾರನಾಗಿದ್ದ ಈತನಿಗೆ 14 ವರ್ಷ ವಯಸ್ಸಿನ ಅನಾರೋಗ್ಯ ಪೀಡಿತ ಮಗನಿದ್ದಾನೆ. ಹುಟ್ಟಿದಾಗಿನಿಂದಲೇ ಈ ಮಗುವಿಗೆ ವಿಚಿತ್ರ ಕಾಯಿಲೆಯೊಂದು ಅಂಟಿಕೊಂಡು ಬಂದಿದೆ. ತಿಂಗಳಲ್ಲಿ ಮೂರ್ನಾಲ್ಕು ಬಾರಿ ವೈದ್ಯರನ್ನು ಕಾಣಲೇಬೇಕು. ಸಮಯಕ್ಕೆ ಸರಿಯಾಗಿ ಮೆಡಿಸಿನ್ ನೀಡಬೇಕು. ಆದರೆ, ಇಂದು ತಾಲಿಬಾನ್ ನಲ್ಲಿ ಏರ್ಪಟ್ಟಿರುವ ಬಿಕ್ಕಟ್ಟು ಈ ಕಂದನ ಪ್ರಾಣಕ್ಕೆ ಸಂಚಕಾರ ತಂದಿದೆ. ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ವೈದ್ಯರು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಮೆಡಿಕಲ್ ಶಾಪ್ ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ಈ ಮಗುವಿಗೆ ಅಗತ್ಯವಿದ್ದ ಮೆಡಿಸಿನ್ ಗಳ ಕೊರತೆ ಎದುರಾಗಿದೆ. ಇಂತಹ ಕಷ್ಟದ ಕಾಲ ನಮಗೆ ಬರಬಾರದಿತ್ತು. ನನ್ನ ಕಣ್ಮುಂದೆ ನನ್ನ ಮಗ ಸಾಯುವುದನ್ನು ನಾನು ನೋಡಲಾರೆ ಎಂದು ಬಿಕ್ಕಳಿಸುತ್ತಿದ್ದಾರೆ ಗುಲಾಮ್ ಅಹ್ಮದ್.
ಇದು ಕೇವಲ ಶಬೀನಾ ಹಾಗೂ ಅಹ್ಮದ್ ಅವರ ಕಥೆಗಳು ಮಾತ್ರವಲ್ಲ, ಇವರಂತೆ ಸಾಕಷ್ಟು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುಂತಹ ಪರಿಸ್ಥಿತಿ ಅಲ್ಲಿ ಒಂದೊದಗಿದೆ ಎನ್ನುತ್ತಿವೆ ವರದಿಗಳು.