Advertisement

ಕೆರೆಗೆ ಹಾರವಾಗಲಿವೆ ಸಾವಿರ ಮರ?

11:30 AM Jan 05, 2018 | |

ಬೆಂಗಳೂರು: ನಗರದ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಬೆಂಗಳೂರು ಸುತ್ತಮುತ್ತಲಿನ ನಗರಗಳ ಕೆರೆಗಳನ್ನು ತುಂಬಿಸಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ ನೂರಾರು ಎಕರೆಯಲ್ಲಿ ಬೆಳೆದುನಿಂತ ಸಾವಿರಾರು ಮರಗಳು ಬಲಿಯಾಗಲಿವೆ.

Advertisement

ಅಕೇಶಿಯ, ಅತ್ತಿ, ನೀಲಗಿರಿ ಸೇರಿದಂತೆ ಸಾಮಾಜಿಕ ಅರಣ್ಯದಡಿ ಕೆರೆಯಂಗಳದಲ್ಲಿ ಬೆಳೆದುನಿಂತ ಸಾವಿರಕ್ಕೂ ಅಧಿಕ ಮರಗಳಿಗೆ ಈಗ ಕೊಡಲಿ ಪೆಟ್ಟು ಬೀಳಲಿದೆ. ಮರಗಳ ತೆರವಿಗೆ ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ನಗರದಲ್ಲಿ ತಲೆಯೆತ್ತಿರುವ ಮತ್ತು ನಿರ್ಮಾಣಗೊಳ್ಳಲಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ಯಶವಂತಪುರ, ಆನೇಕಲ್‌, ಪೂರ್ವಭಾಗ ಒಳಗೊಂಡಂತೆ ಬೆಂಗಳೂರು ವ್ಯಾಪ್ತಿಯಲ್ಲಿ ಅಂದಾಜು 80ಕ್ಕೂ ಹೆಚ್ಚು ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಈಗಾಗಲೇ ಆ ಕೆರೆಯಂಗಳದಲ್ಲಿ ಹತ್ತಾರು ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಮರಗಳು ಬೆಳೆದುನಿಂತಿವೆ. ಅವೆಲ್ಲವುಗಳನ್ನು ಈಗ ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. 

ಕೆರೆಯಂಗಳದಲ್ಲಿ ಮರ; ನಿಯಮಬಾಹಿರ?: ಕೇವಲ ಕೆರೆಗಳನ್ನು ತುಂಬಿಸುವುದಲ್ಲ, ಈ ಕೆರೆಗಳ ಪುನರುಜ್ಜೀವನಗೊಳಿಸುವ ಉದ್ದೇಶವೂ ಇಲಾಖೆಗಿದೆ. ಈ ನಿಟ್ಟಿನಲ್ಲಿ ಹೂಳು ತೆಗೆಯುವುದು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು, ಬದುಗಳನ್ನು ನಿರ್ಮಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ ಕೆರೆಗಳ ಅಂಗಳದಲ್ಲಿ ಬೆಳೆದ ಮರಗಳನ್ನು ತೆರವುಗೊಳಿಸುವುದು ಅನಿವಾರ್ಯ ಆಗಲಿದೆ. ಅಷ್ಟಕ್ಕೂ ಕೆರೆ ಅಂಚಿನಲ್ಲಿ ಗಿಡ ನೆಡಲು ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು.

ಆದರೆ, ಬಹುತೇಕ ಎಲ್ಲ ಮರಗಳನ್ನೂ ಅಂಗಳದಲ್ಲಿ ಬೆಳೆಸಲಾಗಿದೆ. ಇದು ನಿಯಮಬಾಹಿರ. ಕೆರೆ ಅಂಗಳದಲ್ಲಿ ಮರಗಳನ್ನು ಬೆಳೆಸಿದರೆ, ಕೆರೆಗಳ ಗತಿ ಏನು? ಅದೇನೇ ಇರಲಿ, ಕೆರೆಯಂಗಳದಲ್ಲಿ ಬೆಳೆದ ಮರಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದರಿಂದ ತೆರವುಗೊಳಿಸಲು ಪತ್ರ ಬರೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಮರಗಳ ಲೆಕ್ಕ ಮಾಡಬೇಕು: ಮರಗಳ ತೆರವಿಗೆ ಸಂಬಂಧಿಸಿದ ಪತ್ರ ಕೈಸೇರಿದೆ. ಎಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂಬುದನ್ನು ಇನ್ನೂ ಅಂದಾಜಿಸಿಲ್ಲ. ಆದರೆ, ಸಾವಿರಾರು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಇದರಲ್ಲಿ ಅಕೇಶಿಯ, ಅತ್ತಿ, ಜಾಲಿ, ನೀಲಗಿರಿ ಮತ್ತಿತರ ಪ್ರಕಾರದ ಮರಗಳು ಇವೆ.

ಯಶವಂತಪುರದಲ್ಲೇ 20 ಕೆರೆಗಳನ್ನು ತುಂಬಿಸಲು ಉದ್ದೇಶಿಸಿದ್ದು, ಕೆರೆ ಅಂಗಳದಲ್ಲಿನ ಮರಗಳನ್ನು ತೆರವುಗೊಳಿಸಬೇಕಾಗಿದೆ. ಈ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ. ಪರಿಶೀಲನಾ ಹಂತದಲ್ಲಿದೆ ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು ನಗರದ ಸಂಸ್ಕರಸಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳಲ್ಲಿನ ಅಂದಾಜು 250 ಕೆರೆಗಳಿಗೆ 650 ಎಂಎಲ್‌ಡಿ ನೀರು ಹರಿಸಲು ಉದ್ದೇಶಿಸಲಾಗಿದೆ. ಈ ಪೈಕಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಕೆರೆಗಳು ಬರುತ್ತವೆ. 

650 ಎಂಎಲ್‌ಡಿ ನೀರು ಕೆರೆಗಳಿಗೆ: ನಗರದಲ್ಲಿ ಪ್ರಸ್ತುತ 24 ತ್ಯಾಜ್ಯನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳಿದ್ದು, ಇವುಗಳಿಂದ ನಿತ್ಯ 1,057 ದಶಲಕ್ಷ ಲೀ. ನೀರು ಸಂಸ್ಕರಿಸಲಾಗುತ್ತಿದೆ. ಈ ಪೈಕಿ ಸದ್ಯ 440 ಎಂಎಲ್‌ಡಿ ಕೋಲಾರಕ್ಕೆ ಹಾಗೂ 210 ಎಂಎಲ್‌ಡಿ ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸುವ ಪ್ರಸ್ತಾವನೆ ಇದೆ. ಇನ್ನೂ 9 ಘಟಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಮುಂದಿನ ದಿನಗಳಲ್ಲಿ ಇದರಿಂದ 515 ಎಂಎಲ್‌ಡಿ ಶುದ್ಧೀಕರಿಸಿದ ನೀರು ಲಭ್ಯವಾಗಲಿದೆ. ಇದಲ್ಲದೆ, ಕಾವೇರಿ 5ನೇ ಹಂತದಲ್ಲಿ ಮತ್ತೆ 16 ತ್ಯಾಜ್ಯನೀರು ಸಂಸ್ಕರಣಾ ಘಟಕ ನಿರ್ಮಿಸುವ ಯೋಜನೆ ಇದೆ. ಆಗ ಒಟ್ಟಾರೆ ನಿತ್ಯ 1,701 ದಶಲಕ್ಷ ಲೀ. ನೀರು ಸಿಗಲಿದೆ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ತ್ಯಾಜ್ಯನೀರು ನಿರ್ವಹಣೆ) ಎನ್‌. ಸತೀಶ್‌ ತಿಳಿಸುತ್ತಾರೆ. 

ಎಷ್ಟು ಕೆರೆಗಳಿಗೆ ನೀರು?
ಕೋಲಾರ    126
ಚಿಕ್ಕಬಳ್ಳಾಪುರ    64
ಬೆಂಗಳೂರು    69
ಹರಿಸಲಿರುವ ನೀರು    650 ಎಂಎಲ್‌ಡಿ

ಎಲ್ಲಿ, ಎಷ್ಟು ಮರಗಳಿಗೆ ಕುತ್ತು?: ಯಶವಂತಪುರ, ಆನೇಕಲ್‌, ಹೊಸಕೋಟೆ ಸೇರಿದಂತೆ ಸುತ್ತಲಿನ ಕೆರೆಗಳಲ್ಲಿನ ಸಾವಿರಕ್ಕೂ ಅಧಿಕ ಮರಗಳಿಗೆ ಕುತ್ತು ಬಂದಿದೆ. ಜೆಸಿಬಿ ಸಹಾಯದಿಂದ ಈ ಕೆರೆಗಳನ್ನು ಎರಡರಿಂದ ಮೂರು ಅಡಿ ಆಳ ಮಣ್ಣು ತೆಗೆಯಬೇಕು. ಜತೆಗೆ ಅಂಗಳವನ್ನು ಸಮತಟ್ಟು ಮಾಡಬೇಕಾಗುತ್ತದೆ.

ಇದಕ್ಕಾಗಿ ಈ ಮರಗಳ ತೆರವು ಮಾಡುವುದು ಅನಿವಾರ್ಯ. ಇದಕ್ಕೆ ಇದುವರೆಗೆ ಪರಿಸರವಾದಿಗಳ ಯಾವುದೇ ಆಕ್ಷೇಪ ಬಂದಿಲ್ಲ. ಮರಗಳ ತೆರವಿನ ಹಿಂದಿರುವ ಉದ್ದೇಶ ಕೂಡ ಪರಿಸರಕ್ಕೆ ಪೂರಕವಾದುದಾಗಿದೆ. ಕೆರೆಗಳನ್ನು ಉಳಿಸಲು ಮತ್ತು ಆ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಇದು ಅಗತ್ಯ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next