Advertisement

ಸಾವಿರಾರು ಮಂದಿಗೆ “ಉದ್ಯೋಗ ಖಾತ್ರಿ’

06:54 AM May 17, 2020 | Suhan S |

ತೀರ್ಥಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಸಾವಿರಾರು ಮಂದಿಗೆ ಕೂಲಿ ಕೆಲಸ ನೀಡಲು ಸಾಧ್ಯವಾಗಿದ್ದು, ಕೂಲಿ ಕೆಲಸ ಮಾಡಲು ಮುಂದೆ ಬರುವ ಪ್ರತಿಯೊಬ್ಬರಿಗೂ ತಕ್ಷಣ ಜಾಬ್‌ ಕಾರ್ಡ್‌ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಿಳಿಸಿದರು.

Advertisement

ತೀರ್ಥಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆ  ಯಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಪ್ರಸ್ತುತ ಸರಾಸರಿ ಪ್ರತಿದಿನ 49ಸಾವಿರ ಮಂದಿ ಕೂಲಿ ಕೆಲಸದಲ್ಲಿ ತೊಡಗಿದ್ದು, ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸವನ್ನು ನಿಗದಿಪಡಿಸಲಾಗಿದೆ. ಅಂತರ್ಜಲ ಚೇತನ ಯೋಜನೆಯಡಿ 32836 ಕಾಮಗಾರಿಗಳನ್ನು ಗುರುತಿಸಲಾಗಿದ್ದು, ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲದೆ ಕೂಲಿ ಕೆಲಸದವರಿಗೆ ಕುಡಿಯುವ ನೀರು ಇತ್ಯಾದಿ ಮೂಲಸೌಲಭ್ಯಗಳನ್ನು ಸಹ ಕಲ್ಪಿಸಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಕಾಮಗಾರಿಗಳ ಪರಿಶೀಲನೆ: ಸಚಿವರು ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿರುವ ನೊಣಬೂರು ಗ್ರಾಪಂನ ಮಲ್ಲೇಸರ ಜೋಡು ಕೆರೆ ಹೂಳು ಮತ್ತು ದಂಡೆ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು. ಇದೇ ರೀತಿ ಅರಗ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್‌ಬಂಡ್‌ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಅಧಿಕಾರಿಗಳೊಂದಿಗೆ ಸಭೆ: ಗ್ರಾಮೀಣ ಭಾಗದ ನಿರುದ್ಯೋಗಿ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕಲ್ಪಿಸಬೇಕು. ಇದರಿಂದ ಈ ಸಂಕಷ್ಟಮಯ ಸಂದರ್ಭದಲ್ಲಿ ಆರ್ಥಿಕ ಪುನಶ್ಚೇತನ ಹೊಂದಲು ಸಾಧ್ಯವಾಗಲಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಬಂದಿರುವವರು, ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದರೆ ತಕ್ಷಣ ಜಾಬ್‌ ಕಾರ್ಡ್‌ ನೀಡಬೇಕು ಎಂದು ಸಚಿವರು ಬಳಿಕ ತೀರ್ಥಹಳ್ಳಿ ಸಭಾಂಗಣದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದರು. ಹೊರರಾಜ್ಯಗಳಿಂದ ಬಂದಿರುವ ವ್ಯಕ್ತಿಗಳಿಂದಾಗಿ ಹಸಿರು ವಲಯದಲ್ಲಿದ್ದ ಜನರ ನೆಮ್ಮದಿಗೆ ಭಂಗವುಂಟಾಗಿದೆ. ಈ ಬಗ್ಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಅಗ್ರಹಾರ ಹೋಬಳಿಯ ಹುಂಚದಕಟ್ಟೆವರೆಗೆ ಮತ್ತು ಆಗುಂಬೆ ಹೋಬಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ತುಂಗಾನದಿಯಿಂದ ನೀರನ್ನು ಒದಗಿಸುವ ಅಗತ್ಯವಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ನೊಣಬೂರು ಗ್ರಾಪಂ ವ್ಯಾಪ್ತಿಯ ಬಾವಿಗಳ ನೀರಿನಲ್ಲಿ ಫ್ಲೊರೈಡ್‌ ಅಂಶ ಕಂಡುಬಂದಿದೆ ಎಂದರು.

Advertisement

ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌, ಸದಸ್ಯರಾದ ಕೆ.ಶ್ರೀನಿವಾಸ್‌, ಅಪೂರ್ವ ಶರ , ತಾಪಂ ಸದಸ್ಯರಾದ ಚಂದವಳ್ಳಿ ಸೋಮಶೇಕರ್‌, ಲಕ್ಷ್ಮೀ  ಉಮೇಶ್‌, ಗೀತಾಶೆಟ್ಟಿ, ಗ್ರಾಪಂ ಅಧ್ಯಕ್ಷ ಧರಣೇಶ್‌, ಜಿಪಂ ಸಿಇಒ ವೈಶಾಲಿ, ತಹಶೀಲ್ದಾರ್‌ ಡಾ| ಎಸ್‌.ಬಿ. ಶ್ರೀಪಾದ, ತಾಪಂ ಇಒ ಆಶಾಲತಾ, ಅಂಬುತೀರ್ಥ ರಾಘವೇಂದ್ರ, ನಾರಾಯಣ ರಾವ್‌, ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next