ಹಾವೇರಿ: ಕಾನೂನಿನಲ್ಲಿ ಸ್ಪಷ್ಟತೆ ಇಲ್ಲದ ಎಂಬ ಕಾರಣಕ್ಕಾಗಿ ಅಕ್ರಮ ಸಕ್ರಮ ಯೋಜನೆಯಡಿ ಮನೆ ಸಕ್ರಮಗೊಳಿಸಲು ಬಡವರು ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ, ಕಟ್ಟಡ ನಿರ್ಮಿಸಿಕೊಂಡ ಬಡವರಿಗೆ ಕೆಲವೊಂದು ಇತಿಮಿತಿಗಳಲ್ಲಿ ಅವುಗಳನ್ನು ಸಕ್ರಮಗೊಳಿಸಲು ಹಿಂದಿನ ಸರ್ಕಾರ ಅಕ್ರಮ ಸಕ್ರಮ ಕಾಯಿದೆ ಜಾರಿಗೊಳಿಸಿತ್ತು. ಈ ಕಾಯಿದೆಯಲ್ಲಿ ಸ್ಪಷ್ಟತೆ ಇಲ್ಲ ಎಂಬ ಸಬೂಬಿನೊಂದಿಗೆ ಅಧಿಕಾರಿಗಳು ಸಾವಿರಾರು ಅರ್ಜಿಗಳನ್ನು ತಿರಸ್ಕರಿಸಿ, ಮನೆ ಸಕ್ರಮಗೊಳಿಸಿಕೊಳ್ಳುವ ಸಾವಿರಾರು ಬಡವರ ಕನಸು ಭಗ್ನಗೊಂಡಿದೆ.
94ಸಿಯಲ್ಲಿ 11880 ಅರ್ಜಿ ತಿರಸ್ಕೃತ: ಅಕ್ರಮ-ಸಕ್ರಮ ಕಾಯ್ದೆಯಿಂದ ಅನೇಕ ಬಡವರು ಸ್ವಂತ ಸೂರು ಹೊಂದುವ ಕನಸು ಕಂಡಿದ್ದರು. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ಕಟ್ಟಿಕೊಂಡ ಗ್ರಾಮೀಣ ಪ್ರದೇಶದ 12,515 ಫಲಾನುಭವಿಗಳು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 11880 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು ಇದರಲ್ಲಿ ಕೇವಲ 602 ಅರ್ಜಿಗಳನ್ನು ಸಕ್ರಮಕ್ಕೆ ಪರಿಗಣಿಸಲಾಗಿದೆ. ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದವರ ಸಂಖ್ಯೆಯೇ ಅಧಿಕವಾಗಿರುವುದು ಗಮನಾರ್ಹ.
94ಸಿಸಿಯಲ್ಲಿ 653 ಅರ್ಜಿ ತಿರಸ್ಕೃತ: ಗ್ರಾಮೀಣ ಪ್ರದೇಶದ ಫಲಾನುಭವಿಗಳ ಸ್ಥಿತಿಯಂತೆ ನಗರ, ಪಟ್ಟಣ ಪ್ರದೇಶಗಳಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಸ್ಥಿತಿಯೂ ಇದೆ. 94ಸಿಸಿ ಅಡಿಯಲ್ಲಿ ಒಟ್ಟು 793 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಅರ್ಧದಷ್ಟು 653 ಅರ್ಜಿಗಳು ತಿರಸ್ಕೃತಗೊಂಡಿವೆ. ಕೇವಲ 140 ಅರ್ಜಿಗಳನ್ನು ಸಕ್ರಮಕ್ಕೆ ಪರಿಗಣಿಸಲಾಗಿದೆ.
ವಿಶೇಷವೆಂದರೆ 94ಸಿಸಿ ಅಡಿಯಲ್ಲಿ ಸವಣೂರ ಪಟ್ಟಣದಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ. ಇನ್ನು ಬ್ಯಾಡಗಿ ತಾಲೂಕಿನಲ್ಲಿ 140 ಅರ್ಜಿಗಳನ್ನು ಸಕ್ರಮಗೊಳಿಸಿದ್ದು ಬಿಟ್ಟರೆ ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲಿಯೂ ಒಂದು ಅರ್ಜಿಯನ್ನೂ ಸಕ್ರಮಗೊಳಿಸಿಲ್ಲ.
ಭೂ ಕಂದಾಯ ಕಾಯ್ದೆಗೆ ಕೆಲ ಮಾರ್ಪಾಡು ಮಾಡಿ ಸರ್ಕಾರ ಜಾರಿಗೊಳಿಸಿರುವ ಅಕ್ರಮ, ಸಕ್ರಮ ಯೋಜನೆಯಲ್ಲಿ ಬ ಖರಾಬ ಸಾಗು ಕ್ಷೇತ್ರ, ಸಿ ಖರಾಬ ಗೌಠಾಣ, ಅರಣ್ಯ, ಖರಾಬ ಗುಡ್ಡ, ಕಾಯ್ದಿಟ್ಟ ಅರಣ್ಯ ಇಂತಹ ಪ್ರದೇಶದಲ್ಲಿನ ಮನೆಗಳನ್ನು ಸಕ್ರಮಗೊಳಿಸಲು ಸ್ಪಷ್ಟವಾದ ಸೂಚನೆಯಿಲ್ಲ ಎಂಬ ಕಾರಣಕ್ಕಾಗಿ ತಹಸೀಲ್ದಾರ್‌ರು ಅರ್ಜಿಗಳನ್ನು ತಿರಸ್ಕೃರಿಸಿದ್ದಾರೆ. ಒಟ್ಟಾರೆ ಅಕ್ರಮ-ಸಕ್ರಮ ಯೋಜನೆ ಜಿಲ್ಲೆಯಲ್ಲಿ ಯಶಸ್ವಿಯಾಗದೆ ಬಡವರ ಕನಸು ಇನ್ನೂ ಕನಸಾಗಿಯೇ ಇದೆ.
•ಎಚ್.ಕೆ. ನಟರಾಜ