Advertisement

ಸಕಾಲಕ್ಕೆ ನಿರ್ಮಿಸದ ಸಾವಿರಾರು ಮನೆಗಳು ಬ್ಲಾಕ್‌!

02:18 PM May 26, 2022 | Team Udayavani |

ದಾವಣಗೆರೆ: ಮನೆ ಮಂಜೂರಾಗಿದ್ದರೂ ಸಕಾಲದಲ್ಲಿ ಮನೆ ಕಟ್ಟಿಕೊಳ್ಳದ ಜಿಲ್ಲೆಯ ಬರೋಬ್ಬರಿ 30 ಸಾವಿರಕ್ಕೂ ಅಧಿಕ ವಿವಿಧ ಆಶ್ರಯ ಯೋಜನೆ ಫಲಾನುಭವಿಗಳ ಮನೆಗಳನ್ನು ರಾಜೀವಗಾಂಧಿ ವಸತಿ ನಿಗಮ ಬ್ಲಾಕ್‌ ಮಾಡಿದೆ!

Advertisement

ಹೌದು, ಬಸವ, ದೇವರಾಜ ಅರಸು, ಡಾ| ಬಿ.ಆರ್. ಅಂಬೇಡ್ಕರ್‌ ಹಾಗೂ ಪ್ರಧಾನಮಂತ್ರಿ ಆವಾಸ್‌ ವಸತಿ ಯೋಜನೆಗಳಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಒಟ್ಟು 31,135 ಮನೆಗಳನ್ನು ರಾಜೀವಗಾಂಧಿ ವಸತಿ ನಿಗಮ ತಡೆ ಹಿಡಿದಿದೆ. ಇದನ್ನು ತೆರವುಗೊಳಿಸಲು ಅವಕಾಶ ಇದೆಯಾದರೂ ಇದಕ್ಕಾಗಿ ಫಲಾನುಭವಿಗಳು ಹರಸಾಹಸ ಪಡಬೇಕಾಗಿದೆ.

ಕಳೆದ 12 ವರ್ಷಗಳಲ್ಲಿ ಜಿಲ್ಲೆಗೆ ಒಟ್ಟು 1,18,333 ಮನೆಗಳು ಮಂಜೂರಾಗಿವೆ. ಇದರಲ್ಲಿ 71,971 ಮನೆಗಳು ಮಾತ್ರ ಪೂರ್ಣಗೊಂಡಿವೆ. 7190 ಮನೆಗಳು ಇನ್ನೂ ಅಡಿಪಾಯದ ಹಂತದಲ್ಲಿದ್ದರೆ, 2811 ಮನೆಗಳು ಗೋಡೆ ಹಂತದಲ್ಲಿವೆ. 3814 ಮನೆಗಳು ಛಾವಣಿ ಹಂತದಲ್ಲಿದ್ದು, ಒಟ್ಟು 13815 ಮನೆಗಳು ಇನ್ನೂ ಪ್ರಗತಿಯಲ್ಲಿವೆ. ಇದರಲ್ಲಿ 1411 ಮನೆಗಳ ನಿರ್ಮಾಣ ಕಾರ್ಯವೇ ಆರಂಭಗೊಂಡಿಲ್ಲ.

ಬಸವ ವಸತಿ ಯೋಜನೆಯಡಿ ಮಂಜೂರಾದ 21,241 ಮನೆಗಳು, ದೇವರಾಜ ಅರಸು ವಸತಿ ಯೋಜನೆಯಡಿ ಮಂಜೂರಾದ 78 ಮನೆಗಳು, ಡಾ| ಬಿ.ಆರ್. ಅಂಬೇಡ್ಕರ್‌ ನಿವಾಸ ಯೋಜನೆಯಡಿ 4400 ಮನೆಗಳು, ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮಂಜೂರಾದ 5416 ಮನೆಗಳು ಸೇರಿ ಒಟ್ಟು 31,135 ಮನೆಗಳನ್ನು ಬ್ಲಾಕ್‌ ಮಾಡಲಾಗಿದೆ. ಮನೆ ಮಂಜೂರಾಗಿ ಮೂರ್‍ನಾಲ್ಕು ವರ್ಷಗಳು ಕಳೆದರೂ ಮನೆ ಕಟ್ಟಲು ಆರಂಭಿಸದೇ ಇರುವುದೇ ರಾಜೀವಗಾಂಧಿ ವಸತಿ ನಿಗಮ ಮನೆಗಳನ್ನು ಬ್ಲಾಕ್‌ ಮಾಡಲು ಪ್ರಮುಖ ಕಾರಣ. ಹಲವು ವರ್ಷಗಳಾದರೂ ಮನೆ ಕಟ್ಟಿಕೊಂಡಿಲ್ಲ ಎಂದರೆ ಫಲಾನುಭವಿಗೆ ಮನೆಯ ಅವಶ್ಯಕತೆ ಇಲ್ಲ ಎಂದು ನಿಗಮದ ಅಧಿಕಾರಿಗಳು ಪರಿಗಣಿಸಿದರೆ, ಸಕಾಲಕ್ಕೆ ಮನೆ ಕಟ್ಟಿಕೊಳ್ಳದೇ ಇರಲು ತಮಗೆ ಆರ್ಥಿಕ ಸಮಸ್ಯೆ ಕಾರಣ ಎಂಬುದು ಫಲಾನುಭವಿಗಳ ವಾದ. ಒಮ್ಮೆ ಬ್ಲಾಕ್‌ ಆದ ಮೇಲೆ ಅದರನ್ನು ತೆರವುಗೊಳಿಸಿ ಮರು ಮಂಜೂರಾತಿ ಪಡೆಯಲು ಅವಕಾಶ ಇದೆಯಾದರೂ ಈ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ. ಹೀಗಾಗಿ ಮನೆ ಬ್ಲಾಕ್‌ಆದ ಫಲಾನುಭವಿಗಳ ಪಾಲಿಗೆ ಆಶ್ರಯ ಮನೆ ಕನಸಿನ ಮನೆಯೇ ಆಗಲಿದೆ.

ಬಸವ ವಸತಿ ಯೋಜನೆ

Advertisement

ಬಸವ ವಸತಿ ಯೋಜನೆಯಲ್ಲಿ ಜಿಲ್ಲೆಗೆ 2010-11ರಿಂದ ಇಲ್ಲಿಯವರೆಗೆ ಒಟ್ಟು 72,307 ಮನೆಗಳು ಮಂಜೂರಾಗಿವೆ. ಇದರಲ್ಲಿ 42,753 ಮನೆಗಳು ಪೂರ್ಣಗೊಂಡಿವೆ. 4541 ಮನೆಗಳು ಅಡಿಪಾಯ ಹಂತ, 1503 ಮನೆಗಳು ಗೋಡೆ ಹಂತ ಹಾಗೂ 2263 ಮನೆಗಳು ಛಾವಣಿ ಹಂತದಲ್ಲಿವೆ. ಒಟ್ಟು 8307 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಐದು ಮನೆಗಳ ನಿರ್ಮಾಣ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಒಟ್ಟು 21,241 ಮನೆಗಳು ಬ್ಲಾಕ್‌ ಆಗಿವೆ.

ದೇವರಾಜ ಅರಸು ಯೋಜನೆ

ದೇವರಾಜ ಅರಸು ವಸತಿ (ಗ್ರಾಮೀಣ)ಯೋಜನೆಯಲ್ಲಿ ಜಿಲ್ಲೆಗೆ 2010ರಿಂದ ಇಲ್ಲಿವರೆಗೆ ಒಟ್ಟು 2575 ಮನೆಗಳು ಮಂಜೂರಾಗಿವೆ. ಇದರಲ್ಲಿ 1066 ಮನೆಗಳು ಪೂರ್ಣಗೊಂಡಿವೆ. 151 ಮನೆಗಳು ಅಡಿಪಾಯ, 67 ಮನೆಗಳು ಗೋಡೆ ಹಾಗೂ 61 ಮನೆಗಳು ಛಾವಣಿ ಹಂತದಲ್ಲಿವೆ. ಒಟ್ಟು 279 ಮನೆಗಳು ಪ್ರಗತಿ ಹಂತದಲ್ಲಿವೆ. 1152 ಮನೆಗಳ ನಿರ್ಮಾಣ ಶುರುವಾಗಿಲ್ಲ. ಒಟ್ಟು 78 ಮನೆಗಳು ಬ್ಲಾಕ್‌ ಆಗಿವೆ. ಅಂಬೇಡ್ಕರ್‌ ಯೋಜನೆ: ಡಾ| ಬಿ.ಆರ್. ಅಂಬೇಡ್ಕರ್‌ ನಿವಾಸ (ಗ್ರಾಮೀಣ) ಯೋಜನೆಯಡಿ ಜಿಲ್ಲೆಗೆ 2015-16ರಿಂದ ಇಲ್ಲಿಯವರೆಗೆ 15,072 ಮನೆಗಳು ಮಂಜೂರಾಗಿವೆ. ಇದರಲ್ಲಿ 7776 ಮನೆಗಳು ಪೂರ್ಣಗೊಂಡಿವೆ. 1355 ಮನೆಗಳು ಅಡಿಪಾಯ, 675 ಮನೆಗಳು ಗೋಡೆ ಹಾಗೂ 841 ಮನೆಗಳು ಛಾವಣಿ ಹಂತದಲ್ಲಿವೆ. 2871 ಮನೆಗಳು ಪ್ರಗತಿಯಲ್ಲಿದ್ದು 25 ಮನೆಗಳ ಕಾಮಗಾರಿ ಆರಂಭವೇ ಆಗಿಲ್ಲ. ಒಟ್ಟು 4400 ಮನೆಗಳನ್ನು ಬ್ಲಾಕ್‌ ಮಾಡಲಾಗಿದೆ.

ಪಿಎಂಎವೈಜಿ

ಪ್ರಧಾನಮಂತ್ರಿ ಆವಾಸ್‌ (ಗ್ರಾಮೀಣ)ಯೋಜನೆಯಡಿಯಲ್ಲಿ ಜಿಲ್ಲೆಗೆ 28,379 ಮನೆಗಳು ಮಂಜೂರಾಗಿದ್ದು, 20,376 ಮನೆಗಳು ಪೂರ್ಣಗೊಂಡಿವೆ. 1143 ಮನೆಗಳು ಅಡಿಪಾಯ, 566 ಮನೆಗಳು ಗೋಡೆ ಹಾಗೂ 649 ಮನೆಗಳು ಛಾವಣಿ ಹಂತದಲ್ಲಿದ್ದು ಒಟ್ಟು 2358 ಮನೆಗಳು ಪ್ರಗತಿಯಲ್ಲಿವೆ. 229 ಮನೆಗಳ ನಿರ್ಮಾಣ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಒಟ್ಟು 5416 ಮನೆಗಳು ಬ್ಲಾಕ್‌ ಆಗಿವೆ.

ಒಟ್ಟಾರೆ ಜಿಲ್ಲೆಯಲ್ಲಿ ಬಡವರಿಗಾಗಿ ಸಾವಿರಾರು ಆಶ್ರಯ ಮನೆಗಳು ಮಂಜೂರಾಗಿದ್ದರೂ ಅವು ವಾಸ್ತವದಲ್ಲಿ ನಿರ್ಮಾಣವಾಗುತ್ತಿಲ್ಲ. ಇದರಿಂದ ಯೋಜನೆಯ ಲಾಭ ಜನರಿಗೆ ಸಮರ್ಪಕವಾಗಿ ದೊರಕದೇ ಇರುವುದು ವಿಷಾದನೀಯ.

ಮನೆ ಮಂಜೂರಾಗಿ ಹಲವು ವರ್ಷಗಳಾದರೂ ಮನೆ ಕಟ್ಟಿಕೊಳ್ಳದೇ ಇರುವುದರಿಂದ ಅಂಥವರಿಗೆ ಮನೆಯ ಅವಶ್ಯಕತೆ ಇಲ್ಲ ಎಂದು ಪರಿಗಣಿಸಿ ರಾಜೀವಗಾಂಧಿ ವಸತಿ ನಿಗಮವು ಅಂಥ ಸಾವಿರಾರು ಮನೆಗಳನ್ನು ಬ್ಲಾಕ್‌ ಮಾಡಿದೆ. ಮನೆ ಅವಶ್ಯಕತೆ ಇದ್ದವರು ವಿಳಂಬಕ್ಕೆ ಸಕಾರಣ ನೀಡಿ ತಮಗೆ ಮಂಜೂರಾದ ಮನೆಗಳನ್ನು ಬ್ಲಾಕ್‌ನಿಂದ ತೆರವುಗೊಳಿಸಲು ಅವಕಾಶವಿದೆ. ಬಿ. ಮಲ್ಲಾ ನಾಯ್ಕ, ಮುಖ್ಯ ಯೋಜನಾಧಿಕಾರಿ, ದಾವಣಗೆರೆ ಜಿಪಂ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next