ನರಗುಂದ: ತಾಲೂಕಿನ ಇತಿಹಾಸದಲ್ಲೇ ಉಕ್ಕಿ ಹರಿದ ಮಲಪ್ರಭಾ ನದಿ ಮತ್ತು ಬೆಣ್ಣಿಹಳ್ಳ ಪ್ರವಾಹ ಭೀಕರತೆ ಸಾವಿರಾರು ಎಕರೆ ಪ್ರದೇಶದ ಕೃಷಿ ಬೆಳೆಗಳನ್ನು ನೀರು ಪಾಲಾಗಿಸಿದೆ.
ನರಗುಂದ ತಾಲೂಕಿನಲ್ಲಿ ಪ್ರವಾಹ ವಿಕೋಪದಿಂದಾಗಿ ಸುಮಾರು 4.21 ಕೋಟಿ ರೂ. ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
2007 ಮತ್ತು 2009ರಲ್ಲಿ ಮಲಪ್ರಭಾ-ಬೆಣ್ಣಿಹಳ್ಳ ಪ್ರವಾಹ ತಾಲೂಕಿನಲ್ಲಿ ಸಾಕಷ್ಟು ಬೆಳೆಗಳನ್ನು ಜಲಾವೃತಗೊಳಿಸಿತ್ತು. ಅದಕ್ಕಿಂತಲೂ ಮಿಗಿಲಾದ ಪರಿಸ್ಥಿತಿ ದಶಕದ ವೇಳೆಗೆ ಮತ್ತೂಮ್ಮೆ ಅಪ್ಪಳಿಸಿದೆ.
ಮಲಪ್ರಭಾ ನದಿ ದಂಡದ ಲಖಮಾಪುರ, ವಾಸನ, ಬೆಳ್ಳೇರಿ, ಕೊಣ್ಣೂರು, ಬೂದಿಹಾಳ, ಕಪ್ಪಲಿ, ಕಲ್ಲಾಪುರ, ಶಿರೋಳ ಹಾಗೂ ಬೆಣ್ಣಿಹಳ್ಳ ದಂಡದ ಮೂಗನೂರ, ಬನಹಟ್ಟಿ, ಕುರ್ಲಗೇರಿ, ಸುರಕೋಡ, ಹದಲಿ, ಖಾನಾಪುರ, ಗಂಗಾಪುರ, ರಡ್ಡೇರನಾಗನೂರ ಸೇರಿ 16 ಗ್ರಾಮಗಳ ಸಾವಿರಾರು ಎಕರೆ ಪ್ರದೇಶ ಕೃಷಿ ಬೆಳೆಗಳು ಪ್ರವಾಹ ರುದ್ರ ನರ್ತನಕ್ಕೆ ನೀರಿನಲ್ಲಿ ಹಾನಿಯಾಗಿವೆ. ಗೋವಿನಜೋಳ, ಹತ್ತಿ, ಹೆಸರು, ಕಬ್ಬು, ಸೂರ್ಯಕಾಂತಿ, ಶೇಂಗಾ ಬೆಳೆಗಳು ಸೇರಿ ಅಂದಾಜು ಮೂರೂವರೆ ಸಾವಿರ ಹೆಕ್ಟೇರ್ ಪ್ರದೇಶ ಕೃಷಿ ಬೆಳೆಗಳು ಹಾನಿಗೀಡಾಗಿವೆ. ಸುಮಾರು 4.21 ಕೋಟಿ ರೂ.ನಷ್ಟವಾಗಿದೆ ಎಂದು ಕೃಷಿ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ ಎನ್ನಲಾಗಿದೆ.
ಸುಮಾರು 10 ದಿನಗಳ ಕಾಲ ನಿರಂತರ ಸುರಿದ ಮಳೆಯಿಂದಾಗಿ ಪ್ರವಾಹ ಹೊರತುಪಡಿಸಿ ತಾಲೂಕಿನ ಬಯಲು ಸೀಮೆ ಪ್ರದೇಶದ ಸಾಕಷ್ಟು ಬೆಳೆಗಳು ಕೂಡ ತೇವಾಂಶ ಹೆಚ್ಚಳದಿಂದ ಹಳದಿ ವರ್ಣಕ್ಕೆ ತಿರುಗಿ ಹಾನಿಗೀಡಾಗಿವೆ.
ಪ್ರವಾಹಕ್ಕೆ ಕೋಟ್ಯಂತರ ನಷ್ಟ: ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹದಿಂದಾಗಿ 16 ಗ್ರಾಮಗಳಲ್ಲಿ ಪ್ರಾಥಮಿಕ ಸಮೀಕ್ಷೆ ಪ್ರಕಾರ 3.5 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೀಡಾಗಿವೆ. ಸುಮಾರು 4.21 ಕೋಟಿ ರೂ.ನಷ್ಟ ಅಂದಾಜಿಸಲಾಗಿದೆ. ಉಳಿದೆಡೆ ಮಳೆ ಕೊರತೆಯಿಂದ ತಾಲೂಕಿನಲ್ಲಿ ಶೇ.45ರಷ್ಟು ಮಾತ್ರ ಬಿತ್ತನೆಯಾಗಿತ್ತು.
•ಚನ್ನಪ್ಪ ಅಂಗಡಿ,ಸಹಾಯಕ ಕೃಷಿ ನಿರ್ದೇಶಕರು, ನರಗುಂದ
•ಸಿದ್ಧಲಿಂಗಯ್ಯ ಮಣ್ಣೂರಮಠ