ಶ್ರೀರಂಗಪಟ್ಟಣ: ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ಕೆಆರ್‌ಎಸ್ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ರೈತರು ಶುಕ್ರವಾರ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿದರು.
ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆಗಮಿಸಿದ ರೈತ ಸಂಘದ ಕಾರ್ಯಕರ್ತರು, ಕೆಆರ್‌ಎಸ್ ಪ್ರವೇಶದ್ವಾರದ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದೊಂದು ವಾರದಿಂದ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ರೈತಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಆದರೂ ರೈತರ ಮನವಿಗೆ ಸ್ಪಂದಿಸದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೃಷ್ಣರಾಜಸಾಗರ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ ಅವರು ಸ್ಥಳಕ್ಕೆ ಆಗಮಿಸಿ, ರೈತ ಮುಖಂಡರು ಹಾಗೂ ಕಾರ್ಯಕರ್ತರ ಮನವೊಲಿಸುವ ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ.
ರಾಜ್ಯ ಸರ್ಕಾರದ ಆದೇಶವಿಲ್ಲದೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಅಧಿಕಾರಿಗಳು ತಿಳಿಸಿದ್ದರಿಂದ ರೊಚ್ಚಿಗೆದ್ದ ರೈತರು ಅಣೆಕಟ್ಟೆಯೊಳಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಬಂಧಿಸಿ, ಅಲ್ಲಿಂದ ಕರೆದೊಯ್ದರು. ಕೆಆರ್‌ಎಸ್‌ಗೆ ಮುತ್ತಿಗೆ ಹಿನ್ನೆಲೆಯಲ್ಲಿ ಅಣೆಕಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.
ನೀರು ಕೊಡದೆ ಏನಾದರೂ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಜಿಲ್ಲೆಯ ಶಾಸಕರು, ಸಿಎಂ ಅವರೇ ಹೊಣೆಗಾರರು. ನೀರು ಕೊಡದಿದ್ದರೆ ಸಿಎಂ ಮಂಡ್ಯದಲ್ಲಿ ಹೇಗೆ ಓಡಾಡುತ್ತಾರೆ ಎಂಬುದನ್ನು ನೋಡುತ್ತೇವೆ.
-ಬಡಗಲಪುರ ನಾಗೇಂದ್ರ, ರಾಜ್ಯ ರೈತಸಂಘದ ಅಧ್ಯಕ್ಷ.
ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಸಾಲ ಮಾಡಿ ಬೆಳೆ ಬೆಳೆದಿರುವ ರೈತರು ನಷ್ಟದ ಆತಂಕ ಎದುರಿಸುತ್ತಿದ್ದಾರೆ. ನೀರಿಗಾಗಿ ಒಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಯಾರೊಬ್ಬರೂ ಸಮಸ್ಯೆ ಆಲಿಸುತ್ತಿಲ್ಲ.
-ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡ