ಇಳಕಲ್ಲ: ಶನಿವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದ ವಿಜಯ ಮಹಾಂತೇಶ್ವರ ಸಂಸ್ಥಾನಮಠದ 19ನೇ ಪೀಠಾಧಿಪತಿ ಡಾ.ಮಹಾಂತ ಶಿವಯೋಗಿಗಳ ಅಂತ್ಯಕ್ರಿಯೆ ಸರ್ಕಾರಿ ಗೌರವ ಹಾಗೂ ಲಿಂಗಾಯತ ವಿಧಿ ವಿಧಾನಗಳಂತೆ ನೆರವೇರಿತು.
ನಗರದ ಆರ್. ವೀರಮಣಿ ಕ್ರೀಡಾಂಗಣದಲ್ಲಿ ಇಡಲಾಗಿದ್ದ ಡಾ.ಮಹಾಂತ ಶ್ರೀಗಳ ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ 8 ಗಂಟೆಗೆ ಭಜನೆಯೊಂದಿಗೆ ನಗರದ ಪ್ರಮುಖ ರಸ್ತೆ ಮೂಲಕ ಶ್ರೀ ವಿಜಯ ಮಹಾಂತೇಶ ಶಿವಯೋಗಿಗಳ ಕತೃì ಗದ್ದುಗೆಗೆ ತರಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ನಂತರ ಪೂಜ್ಯರ ಅಂತ್ಯಕ್ರಿಯೆ ನೆರವೇರಿತು. ಓಂ ಶ್ರೀ ಗುರು ಬಸವಲಿಂಗಾಯ ನಮಃ ಮಂತ್ರ ಮೊಳಗಿತು.
ಕತೃ ಗದ್ದುಗೆಯಲ್ಲಿ ಡಾ.ಮಹಾಂತ ಶ್ರೀಗಳಿಗೆ ನುಡಿನಮನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ಮುರುಘಾಮಠದ ಮುರುಘಾ ಶರಣರು, ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಗಳು, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಗಳ ಸಮ್ಮುಖದಲ್ಲಿ ರಾಜ್ಯದ ನೂರಾರು ಸ್ವಾಮಿಗಳು ಹಾಗೂ ಗಣ್ಯರು ಆಗಮಿಸಿ ನುಡಿನಮನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಇದಕ್ಕೂ ಪೂರ್ವದಲ್ಲಿ ರಾಜ್ಯದ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ ಶೆಟ್ಟರ್, ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಶಾಸಕ ಎಂ.ಬಿ. ಪಾಟೀಲ ಆಗಮಿಸಿ ಡಾ.ಮಹಾಂತ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಿದರು.
ಮಹಾಂತ ಶ್ರೀಗಳ ಸಾಮಾಜಿಕ ಕ್ರಾಂತಿ ಶಾಶ್ವತ. ಶ್ರೀಗಳು ಇಂದು ನಮಗೆ ನಿತ್ಯ ದರ್ಶನಕ್ಕೆ ಮಠದಲ್ಲಿ ಸಿಗುವುದಿಲ್ಲ. ಆದರೆ, ಅವರ ವಿಚಾರಧಾರೆ, ತತ್ವ, ಸಾಮಾಜಿಕ ಸೇವೆಗಳು ನಿತ್ಯವೂ ನಮಗೆ ಸಿಗುತ್ತವೆ. ಅವರ ಆಶಯದಂತೆ ನಾವೆಲ್ಲ ನಡೆಯಬೇಕು.
– ಬಿ.ಎಸ್.ಯಡಿಯೂರಪ್ಪ, ಹಂಗಾಮಿ ಮುಖ್ಯಮಂತ್ರಿ