ನಮ್ಮೂರಿನ ಅಧ್ಯಕ್ಷರು ಮತ್ತು ತಂಡ ಇಡೀ ಕೆರೆಯನ್ನೇ ಸುತ್ತುವರೆಯಿತು. ಇದನ್ನ ಅರಿತ ಶಿವರಾಜ ಹಿಂದೆ ರಾಜ ಮಹಾರಾಜರ ಕೋಟೆಗೆ ಶತ್ರು ಸೈನ್ಯ ಲಗ್ಗೆ ಇಟ್ಟಾಗ ಎಚ್ಚರಿಸುವ ರೀತಿ ನಮ್ಮನ್ನ ಜೋರಾಗಿ ಕೂಗಿ ಎಚ್ಚರಿಸಿದ. ಒಮ್ಮೆಲೇ ನಾವು ಸಮವಸ್ತ್ರದೊಂದಿಗೆ ಅಲ್ಲಿಂದ ಪಲಾಯನ ಮಾಡಿದೆವು.
ಅದು ಚಡ್ಡಿ ಹಾಕದ ವಯಸ್ಸು. ಅಗಲೇ ಗೆಳೆತನ ಹುಟ್ಟಿತ್ತು ನಮ್ಮೆಲರ ನಂಜಿಲ್ಲದ ಹೃದಯದಲ್ಲಿ. ಶಾಲೆ ಅಂದರೆ ಜೈಲ್ ಅನಿಸುತ್ತಿತ್ತು. ಆಗೆಲ್ಲಾ, ಶನಿವಾರ ನಮಗೆ ಒಪ್ಪತ್ತು ಶಾಲೆ. ಅಂದರೆ ಅರ್ಧದಿನ. ಆವತ್ತು ಎಲ್ಲರು ಮಜಾ ಮಾಡುವ ದಿನ. ಶಾಲೆ ಬಿಟ್ಟ ನಂತರ ನಮ್ಮ ಸ್ನೇಹಿತರ ಟೀಮ್ ಜೊತೆ ಚಿಗಳಿ ಕುಟ್ಟೋದು, ಸಂದೀಪನ ಮನೆಯಲ್ಲಿ “ಶಕ್ತಿಮಾನ್’ ಸೀರಿಯಲ್ ನೋಡೋದು, ಶರತ್‌ನ ಮನೆಯಲ್ಲಿ ಪಪ್ಪಾಯ ಹಣ್ಣು ಕಿತ್ತು ತಿನ್ನೋದು ಎಲ್ಲಾ ಮಾಡುತ್ತಿದ್ದೆವು.
ನಮ್ಮ ತಂಡದಲ್ಲಿ ಗುರುಮೂರ್ತಿ ಅನ್ನೋ ಸ್ನೇಹಿತ ಇದ್ದ. ಅವನಿಗೆ ಈಜು ಬರುತ್ತಿರಲಿಲ್ಲ. ನಾವು ಆಗಾಗ ತುಂಹೊಂಡ ಅನ್ನೋ ಬಾವಿಯಲ್ಲಿ ಈಜುತ್ತಿದ್ದೆವು. ಗುರುಮೂರ್ತಿ ದಡದಲ್ಲೇ ಈಜು ಕಲಿಯುತ್ತಿದ್ದ. ಹೀಗೆ, ನಮ್ಮ ಈಜಾಡುವ ಖುಷಿಯ ಕ್ಷಣಗಳು ಊರಿನ ಅಧ್ಯಕ್ಷರ ಕಣ್ಣಿಗೆ ಬಿತ್ತು. ನಮ್ಮನ್ನು ಪರಮ ತುಂಟರು ಎಂದೇ ಊರಲ್ಲಿ ಹಲವರು ಭಾವಿಸಿದ್ದರು. ಅದೇ ಕಾರಣದಿಂದ, ನಮ್ಮನ್ನ ಬೆತ್ತಲಲ್ಲಿ ಓಡಿಸಬೇಕೆಂದು ಒಂದಷ್ಟು ಜನ ಪ್ಲಾನ್ ಮಾಡಿದ್ದರು. ಹೀಗಾಗಿ, ಈಜುತ್ತಿದ್ದ ನಮಗೆ ಬಟ್ಟೆ ಬಗ್ಗೆ ಗಮನ ಇತ್ತು. ಆದರೆ, ನಮ್ಮ ಊರಿನ ಹೀರೋ ಗುರುಮೂರ್ತಿ ಈಜಿಗೆ ಹೊಸಬ. ಹೀಗಾಗಿ ಅವನು ಅಲಕ್ಷ್ಯ ಮಾಡಿದ. ನಮ್ಮ ಅಧ್ಯಕ್ಷರು ಮತ್ತು ತಂಡ ಇಡೀ ಕೆರೆಯನ್ನೇ ಸುತ್ತುವರೆಯಿತು.
ಇದನ್ನ ಅರಿತ ಶಿವರಾಜ ಹಿಂದೆ ರಾಜ ಮಹಾ ರಾಜರ ಕೋಟೆಗೆ ಶತ್ರು ಸೈನ್ಯ ಲಗ್ಗೆ ಇಟ್ಟಾಗ ಎಚ್ಚರಿಸುವ ರೀತಿ ನಮ್ಮನ್ನ ಜೋರಾಗಿ ಕೂಗಿ ಎಚ್ಚರಿಸಿದ. ಒಮ್ಮೆಲೇ ನಾವು ಸಮವಸ್ತ್ರದೊಂದಿಗೆ ಅಲ್ಲಿಂದ ಪಲಾಯನ ಮಾಡಿದೆವು. ನನ್ನ ಸಹಪಾಠಿಗಳಾದ ಲಿಂಗರಾಜ್, ಅಭಿಜಿತ್, ಸಂದೀಪ, ಶಿವರಾಜ್, ಶರತ್, ಗಣಪತಿ, ಚಡ್ಡಿ ರಂಗ ಒಂದೊಂದು ದಿಕ್ಕಿನತ್ತಾ ಓಡಿದೆವು. ಆದರೆ, ನಮ್ಮ ಸೈನ್ಯದಲ್ಲಿ ಗುರುಮೂರ್ತಿ (ಪ್ರೀತಿಯಿಂದ ಅವನನ್ನ ಗುತ್ಯ ಎಂದು ಕರೆಯುತ್ತಿದ್ದೆವು) ಅಧ್ಯಕ್ಷರ ಕೈಗೆ ಸಿಕ್ಕಿಬಿದ್ದ. ಬಿಸಿಲಿಗೆ ಓಡಿದ್ದರಿಂದ ಮೈ ಒಣಗಿತ್ತು. ದಿಕ್ಕು ತಪ್ಪಿದ್ದ ನಾವು, ಯಾರದ್ದೋ ಹೆಸರು ಕಾಳು ಗದ್ದೆಯಲ್ಲಿ ಬಟ್ಟೆಯನ್ನ ಹಾಕಿಕೊಂಡು ಊರಿನತ್ತ ಬಂದೆವು. ಇತ್ತ ಅಧ್ಯಕ್ಷರು, ಗುತ್ಯನಿಗೆ ಅವನ ಬಟ್ಟೆಗಳನ್ನು ವಾಪಸ್ ಕೊಡಲೇ ಇಲ್ಲ. ಪಾಪ, ಬಟ್ಟೆಗಳು ಸಿಗುವುದಿಲ್ಲ ಎಂದು ಗೊತ್ತಾದ ನಂತರ, ದಡಕ್ಕೆ ಎದ್ದು ಬರದೇ ಆತ ಆ ಕೆರೆಯಲ್ಲೆ ಅಳುತ್ತ ಇದ್ದ. ಕೊನೆಗೆ ಅವನ ಸ್ಥಿತಿ ನೋಡಲಾರದೆ ಅಧ್ಯಕ್ಷರೇ ಬಂದು ಗುತ್ಯನಿಗೆ ಸಮವಸ್ತ್ರವನ್ನ ವಾಪಸ್ ನೀಡಿದರು.
ಅವತ್ತೇನೋ ಹಿರಿಯರ ಬೈಗುಳದಿಂದ ಪಾರಾದೆವು. ಆದರೆ ಸೋಮವಾರ ತರಗತಿಯಲ್ಲಿ ಹೆಡ್ ಮಾಸ್ಟರ್ ಕೂಡ ಇದೇ ವಿಷಯವಾಗಿ ವಿಚಾರಣೆ ನಡೆಸಿದರು. ಶಾಲೆ ಮುಗಿದ ತಕ್ಷಣ ಹುಡುಗರು ಮನೆಗೆ ಹೋಗದೆ ಈಜು ಬಿದ್ದಿದ್ದರೆಂಬ ಸುದ್ದಿಯನ್ನು ನಮ್ಮೂರ ಅಧ್ಯಕ್ಷರೇ ಮುಖ್ಯಾಪಾಧ್ಯಾಯರಿಗೆ ತಲುಪಿಸಿದ್ದರು.
ಮೇಷ್ಟ್ರ ಕೈಲಿದ್ದ ಚಿತ್ತ ಕಂಡ ತಕ್ಷಣ, ಯಾರ್ಯಾರು ಈಜಲು ಹೋಗಿದ್ದೆವೆಂದು ಗುರುಮೂರ್ತಿಯೇ ವಿವರವಾಗಿ ಹೇಳಿಬಿಟ್ಟ. ಅವತ್ತು ಎಲ್ಲರನ್ನೂ ನಿಲ್ಲಿಸಿದ ಎಚ್.ಎಂ. ಶಿಕ್ಷೆಯ ರೂಪದಲ್ಲಿ 100 ಬಸ್ಕಿ ಹೊಡೆಸಿದರು. ಈ ಶಿಕ್ಷೆಗೆ ಹೆದರಿದ ಗುರುಮೂರ್ತಿ, ಅಂದೇ ಈಜಿಗೆ ಗುಡ್‌ಬೈ ಹೇಳಿದ. ಈಗ, ಹಳೆಯದನ್ನೆಲ್ಲ ನೆನಪಿಸಿಕೊಂಡು, ಈಜು ಹೊಡೆದಿದ್ದಕ್ಕೆ 1000 ಬಸ್ಕಿಯ ಬಹುಮಾನ ಸಿಕ್ತು ಅನ್ನುತ್ತಾ ನಾನು, ಗುರುಮೂರ್ತಿಯೂ ನಗುತ್ತಿರುತ್ತೇವೆ…
ಈ. ಪ್ರಶಾಂತ್ ಕುಮಾರ್