Advertisement

ಸಾವಿರಾರು ಇರುವೆ ಕಚ್ಚಿದರಷ್ಟೇ ಸರ್ಕಾರವೆಂಬ ಆನೆಗೆ ನಾಟುವುದು

12:19 PM Nov 28, 2017 | Team Udayavani |

ಬೆಂಗಳೂರು: “ಅಕ್ರಮ ಗಣಿಗಾರಿಕೆ ಸೇರಿದಂತೆ ಕಳೆದ ಐದಾರು ವರ್ಷಗಳಲ್ಲಿ ಒಂದಿಲ್ಲೊಂದು ಅಕ್ರಮ ಸಂಗತಿಗಳು ಬೆಳಕಿಗೆಬರುತ್ತಲೇ ಇವೆ. ಆದರೆ, ಅವೆಲ್ಲವೂ ಸರ್ಕಾರ ಎಂಬ ಆನೆಗೆ ಇರುವೆ ಕಚ್ಚಿದಂತಾಗಿದೆ ಅಷ್ಟೇ ಎಂದು ನಿತ್ಯೋತ್ಸವ ಕವಿ ಪ್ರೊ.ನಿಸಾರ್‌ ಅಹಮ್ಮದ್‌ ಹೇಳಿದರು.

Advertisement

ನಗರದ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರ ಛಾಯಾಗ್ರಾಹಕ ಸುಧೀರ್‌ ಶೆಟ್ಟಿ ಅವರು ಹಮ್ಮಿಕೊಂಡಿದ್ದ “ಕುಮಾರಸ್ವಾಮಿ ದೇವಸ್ಥಾನದ 2 ಕಿ.ಮೀ ವ್ಯಾಪ್ತಿಯಲ್ಲಿ ಇದ್ದ ಗಣಿಗಾರಿಕೆ ನಿಷೇಧವನ್ನು 300 ಮೀ.ಗೆ ಇಳಿಸಿದ ಸರ್ಕಾರದ ಅಧಿಸೂಚನೆ ಮತ್ತು ಇದರಿಂದ ಆಗಬಹುದಾದ ಪರಿಣಾಮಗಳು’ ಕುರಿತ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ನಂತರ ಅವರು ಮಾತನಾಡಿದರು.

“ಸಂಡೂರಿನ ಕುಮಾರಸ್ವಾಮಿ ಬೆಟ್ಟದ ಸುತ್ತಲಿನ ಗಣಿಗಾರಿಕೆ ಕುರಿತ ಚಿತ್ರಗಳು ಮನಸ್ಸಿಗೆ ನಾಟುತ್ತವೆ. ಇಂತಹ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಎಷ್ಟೇ ಹೇಳಿದರೂ ಆನೆಗೆ ಒಂದು ಇರುವೆ ಕಚ್ಚಿದಂತಷ್ಟೇ. ಆದ್ದರಿಂದ ಸಾರ್ವಜನಿಕರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು. ಸಹಸ್ರಾರು ಇರುವೆಗಳು ಸೇರಿ ಸರ್ಕಾರವೆಂಬ ಆನೆಗೆ ಕಚ್ಚಿದಾಗ ಸ್ವಲ್ಪಮಟ್ಟಿಗಾದರೂ ನೋವು ತಟ್ಟುತ್ತದೆ. ಆ ಮೂಲಕವಾದರೂ ಆಡಳಿತ ಎಚ್ಚೆತ್ತುಕೊಳ್ಳುವ ಸಾಧ್ಯತೆ ಇದೆ,’ ಎಂದು ಸೂಚ್ಯವಾಗಿ ಹೇಳಿದರು.

ಸುಧೀರ್‌ ಶೆಟ್ಟಿ ಅವರು ತೆಗೆದ ಚಿತ್ರಗಳು ಭೂಮಿತಾಯಿಯ ಮೇಲೆ ಮನುಷ್ಯ ನಡೆಸುತ್ತಿರುವ ಅತ್ಯಾಚಾರಕ್ಕೆ ಕನ್ನಡಿ ಹಿಡಿಯುತ್ತವೆ. “ಮನುಷ್ಯರಾಗಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸ್ವತಃ ಚಿತ್ರಗಳು ಸಾರುತ್ತಿವೆ. ಜನ ಮತ್ತು ಆಡಳಿತದಲ್ಲಿ ಪರಿಸರದ ಬಗ್ಗೆ ಜಾಗೃತರಾಗದಿದ್ದರೆ ಕರ್ನಾಟಕ ಕೂಡ ಮತ್ತೂಂದು ರಾಜಸ್ತಾನ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. 

“ಕುಮಾರಸ್ವಾಮಿ ಬೆಟ್ಟದ ಸುತ್ತಲಿನ ಜನರನ್ನು ಸರ್ಕಾರ “ಮತದಾರರು’ ಎಂದು ಪರಿಗಣಿಸುತ್ತದೆ. ಜನಗಣತಿ ವೇಳೆ ಅಲ್ಲಿನ ಜನರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಆದರೆ, ಆ ಜನರನ್ನು ಬದುಕಲು ಬಿಡುತ್ತಿಲ್ಲ. ಇದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು. 

Advertisement

ಜನರಿಗೆ ಮಾಡಿದ ದ್ರೋಹ: ಸಮಾಜ ಪರಿವರ್ತನಾ ವೇದಿಕೆ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಮಾತನಾಡಿ, 2013-14ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಲ್ಲದೆ, ಪಾದಯಾತ್ರೆ ಕೂಡ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ 2 ಕಿ.ಮೀ. ಇದ್ದ ನಿರ್ಬಂಧವನ್ನು 300 ಮೀ.ಗೆ ಇಳಿಸಿರುವುದು ಪುರಾತನ ದೇವಸ್ಥಾನಕ್ಕೆ ಗಂಡಾಂತರ ಮಾತ್ರವಲ; ಜನರಿಗೆ ಮಾಡಿದ ದ್ರೋಹ ಕೂಡ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1978ರಲ್ಲಿ ದೇವರಾಜ ಅರಸು ಅವರು ಕುಮಾರಸ್ವಾಮಿ ದೇವಸ್ಥಾನ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದ್ದರು. ಆದರೆ, ಮತ್ತೂಬ್ಬ ದೇವರಾಜ ಅರಸು ಎಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಆ ಅಧಿಸೂಚನೆ ವಾಪಸ್‌ ಪಡೆದು, 300 ಮೀ.ಗೆ ಇಳಿಸಿದ್ದಾರೆ. ಇದರಿಂದ ಪುರಾತನ ದೇವಾಲಯಗಳಿಗೆ ಗಂಡಾಂತರ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಛಾಯಾಗ್ರಹಕ ಸುಧೀರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next