Advertisement

ಅಘನಾಶಿನಿ ಪ್ರವಾಹದಿಂದ ಸಾವಿರಾರು ಎಕರೆ ಭತ್ತ ನಾಶ

01:06 PM Aug 13, 2019 | Suhan S |

ಕುಮಟಾ: ಅಘನಾಶಿನಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಹಲವಾರು ಎಕರೆ ಕೃಷಿ ಭೂಮಿಗೆ ಹಾನಿಯಾಗಿದ್ದು, ಭತ್ತ ಭಾರೀ ಪ್ರಮಾಣದಲ್ಲಿ ನಾಶಹೊಂದಿವೆ.

Advertisement

ತಾಲೂಕಿನ ಹೆಗಡೆ, ಛತ್ರಕೂರ್ವೆ, ಐಗಳಕೂರ್ವೆ, ದಿವಗಿ, ಮಣಕಿ, ಮಿರ್ಜಾನ್‌ ಸೇರಿದಂತೆ ಇನ್ನಿತರ ಹೋಬಳಿಯ ಹಲವು ಭಾಗಗಳು ಹಾಗೂ ಗೋಕರ್ಣದ ತೊರ್ಕೆ, ನಾಡುಮಾಸ್ಕೇರಿ, ಬಾಗಿಲು ಪಟ್ಟಣ ಸೇರಿದಂತೆ ಸುಮಾರು 1300 ಹೆಕ್ಟೇರ್‌ಗೂ ಅಧಿಕ ಗದ್ದೆಗಳಿಗೆ ನೀರು ನುಗ್ಗಿದ್ದು, 1000 ಹೆಕ್ಟೇರ್‌ಗೂ ಅಧಿಕ ಭತ್ತದ ಭೂಮಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಈ ಬಾರಿಯ ಮಳೆಯು ತಡವಾಗಿ ಆರಂಭವಾದ ಕಾರಣ ಜನರು ನಾಟಿ ಕಾರ್ಯವನ್ನು ಕೆಲದಿನಗಳ ಹಿಂದಷ್ಟೇ ಮುಗಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಘನಾಶಿನಿ ನದಿ ಪ್ರವಾಹ ಉಂಟಾಗಿ ಭತ್ತದ ಗದ್ದೆಗಳಿಗೆ ನುಗ್ಗಿ ರೈತನಿಗೆ ಸಂಕಷ್ಟ ತಂದಿದೆ. ತಾಲೂಕಿನಾದ್ಯಂತ ತುಂಡು ಭೂಮಿಯ ಕೃಷಿಕರೇ ಹೆಚ್ಚಾಗಿದ್ದು, ವರ್ಷದ ಕೂಳನ್ನು ಒದಗಿಸುತ್ತಿದ್ದ ಬೆಳೆಗಳು ನೀರಿನಲ್ಲಿ ಮುಳುಗಿದ ಕಾರಣ ಸಸಿ ಸಂಪೂರ್ಣ ಕೊಳೆತು ಹೋಗಿವೆ.

ನೆರೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ತಾಲೂಕಿನಾದ್ಯಂತ ಜಂಟಿಯಾಗಿ ಸರ್ವೆ ಕಾರ್ಯ ಆರಂಭಿಸಿದ್ದು, ಕೆಲ ದಿನಗಳಲ್ಲಿ ಎಲ್ಲ ಪ್ರದೇಶಗಳ ಹಾನಿಯ ಅಂತಿಮ ವರದಿ ಸಲ್ಲಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭತ್ತದ ಬೆಳೆ ನಾಶಕ್ಕೆ ಎನ್‌ಡಿಆರ್‌ಎಫ್‌ ನಿಧಿಯಿಂದ 1 ಗುಂಟೆಗೆ 68 ರೂ. ಪರಿಹಾರ ಧನ ನಿಗದಿಪಡಿಸಿರುವುದು ನಾಟಿ ಹಾಗೂ ಉಳುಮೆ ಕಾರ್ಯಕ್ಕೆ ಬಳಸಿದ ಮೊತ್ತವೂ ನಮಗೆ ದೊರೆಯುವುದಿಲ್ಲ ಎಂಬುದು ರೈತರ ಅಳಲಾಗಿದೆ. ರಾಜ್ಯ ಸರಕಾರ ತನ್ನಿಂದಾದ ಪರಿಹಾರ ನೀಡಿ, ಇರುವ ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂಬುದು ಭತ್ತದ ಬೆಳೆಗಾರರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next