Advertisement

6ನೇ ತರಗತಿಯಿಂದಲೇ ಹೆಣ್ಣು ಮಕ್ಕಳಿಗೆ ಕರಾಟೆ ಅಭ್ಯಾಸಕ್ಕೆ ಚಿಂತನೆ: ಸಚಿವ ಕೋಟ

09:55 AM Jun 01, 2022 | Team Udayavani |

ಬೆಳ್ತಂಗಡಿ: ಈ ವರ್ಷದಿಂದ 6ನೇ ತರಗತಿಯಿಂದ ಎಲ್ಲ ಹೆಣ್ಣು ಮಕ್ಕಳಿಗೆ ಕರಾಟೆ ತರಗತಿಯನ್ನು ವಿಸ್ತರಿಸಬೇಕು ಎಂಬ ಯೋಚನೆಯಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌, ಸ್ಮಾರ್ಟ್‌ ಕ್ಲಾಸ್‌, ತರಗತಿಗೊಂದು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎನ್ನುವುದು ಶ್ರೀಮಂತರ ಸೊತ್ತು, ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿದೆ ಎಂದು ಯೋಚಿಸದೆ, ನಾವು ಕೂಡ ಎಲ್ಲ ವರ್ಗದ ಮಕ್ಕಳೊಂದಿಗೆ ಸ್ಪರ್ಧಿಸಿ ವೈದ್ಯರು ಅಥವಾ ಎಂಜಿನಿಯರ್‌ ಅಗಲು ಸಮಾಜ, ಸರಕಾರ, ವ್ಯವಸ್ಥೆ ಕಲ್ಪಿಸಿಕೊಟ್ಟಿದೆ ಎಂದು ಅರ್ಥೈಸಿ ಶಿಕ್ಷಣದಲ್ಲಿ ತಲ್ಲೀನರಾದರೆ ಉತ್ತಮ ಅವಕಾಶ ಸಿಗುತ್ತದೆ ಎಂದರು.

ರಾಜ್ಯದಲ್ಲಿ 792 ಶಾಲೆಗಳಲ್ಲಿ 35,267 ಮಕ್ಕಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. 35,248 ಮಕ್ಕಳು ಪ್ರಥಮ ಮತ್ತು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅದರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ಮಕ್ಕಳು 625 ಅಂಕ ಪಡೆದಿದ್ದು, ಮಚ್ಚಿನ ಶಾಲೆಯ ರೋಷನ್‌ ಇರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಮೊರಾರ್ಜಿ ಶಾಲೆಗೆ ಸಂಬಂಧಿಸಿ 14 ಮಕ್ಕಳು ಐಐಟಿ ಮತ್ತು ಸಮಾನವಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಬಡವರ ಮಕ್ಕಳು ಐಐಟಿ ಸಂಸ್ಥೆ ಸೇರುವುದೇ ದಾಖಲೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಯಾವ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರೋ ಅದೇ ಸಂಸ್ಥೆಯಲ್ಲಿ ನಮ್ಮ ರಾಜ್ಯದ ಮಕ್ಕಳು ಶಿಕ್ಷಣ ಪಡೆದು ವಿದೇಶ ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ನಾವೆಲ್ಲ ಊಹೆ ಮಾಡುವುದಕ್ಕಿಂತ ಅಧಿಕ ಕೆಲಸ ನಮ್ಮ ಶಿಕ್ಷಣ ವ್ಯವಸ್ಥೆ ಮಾಡುತ್ತಿದ್ದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಾರಿ ಸಿಬಂದಿ ವರ್ಗದ ಕೊರತೆ ನಡು ವೆಯೂ ಎಸೆಸೆಲ್ಸಿಯಲ್ಲಿ ಶೇ. 99.2 ಫಲಿತಾಂಶ ಪಡೆದಿರುವುದಕ್ಕೆ ರಾಜ್ಯದ ಸಿಬಂದಿಯನ್ನು ಅಭಿನಂದಿಸುತ್ತೇನೆ ಎಂದರು.

Advertisement

ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ರೋಶನ್‌ ಮತ್ತು ನಿರಂಜನ್‌ ಅವರನ್ನು ಸಚಿವರು ಸಮ್ಮಾನಿಸಿದರು. ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಸದಸ್ಯರಾದ ಚಂದ್ರಶೇಖರ್‌, ಮಚ್ಚಿನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಸಾಲಿಯಾನ್‌, ತಾ.ಪಂ. ಮಾಜಿ ಸದಸ್ಯೆ ವಸಂತಿ ಮತ್ತಿತರರು ಉಪಸ್ಥಿತರಿದ್ದರು.

ಸಮಸ್ಯೆ ಬಗೆಹರಿಸಲು ಕ್ರಮದ ಭರವಸೆ ಶಿಕ್ಷಕರಿಗೆ ವೇತನ ಪರಿಷ್ಕರಣೆ, ಪ್ರಮೋಷನ್‌, ಮುಂಭಡ್ತಿ, ಹಿಂಭಡ್ತಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನ ಪಡಲಾಗುತ್ತಿದೆ. ಕೊರೊನಾದಿಂದ ಸಿಬಂದಿಗೆ ಪೂರ್ಣಪ್ರಮಾಣದಲ್ಲಿ ವೇತನ ಪರಿಷ್ಕರಣೆ ಮಾಡಲಾಗಿಲ್ಲ. ಸದ್ಯದಲ್ಲೇ ಸಭೆ ಕರೆದು ಸಮಸ್ಯೆ ಬಗೆಹರಿಸಿ ವಾರ್ಡನ್‌ ನೇಮಕಾತಿ ಮಾಡಲು ಮುಂದಾಗಿದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next