Advertisement

ನಿಯಮ ಉಲ್ಲಂಘಿಸುವ ಬಸ್‌ಗಳ ವಿರುದ್ಧ ಕಾರ್ಯಾಚರಣೆಗೆ ಚಿಂತನೆ

10:54 PM Jul 23, 2019 | Team Udayavani |

ಮಹಾನಗರ: ಸಿಟಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆಂದೇ ಮೀಸ ಲಿರುವ ಆಸನ ಅವರಿಗೆ ದೊರಕುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ. ಸಾರಿಗೆ ಇಲಾಖೆ ಇದೀಗ ಈ ದೂರನ್ನು ಗಂಭೀರ ವಾಗಿ ಪರಿಗಣಿಸಿದ್ದು, ಸದ್ಯದಲ್ಲಿಯೇ ನಿಯಮ ಉಲ್ಲಂಘಿಸುವ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

Advertisement

ನಗರದಲ್ಲಿ ದಿನಂಪ್ರತಿ ಸುಮಾರು 300ಕ್ಕೂ ಹೆಚ್ಚು ಸಿಟಿ ಬಸ್‌ಗಳು ನಾನಾ ಕಡೆಗಳಿಗೆ ಸಂಚರಿಸುತ್ತವೆ. ಆದರೆ ಇವುಗಳಲ್ಲಿ ಹಿರಿಯ ನಾಗರಿಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ಸರಕಾರಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಟಿಕೆಟ್‌ ದರದಲ್ಲಾದರೂ ಕಡಿತವಿದ್ದು, ಈ ವ್ಯವಸ್ಥೆ ಖಾಸಗಿ ಸಿಟಿ ಬಸ್‌ಗಳಲ್ಲಿ ಲಭ್ಯವಿಲ್ಲ.

ಪಾಲನೆಯಾಗದ ನಿಯಮ
ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸಿಟಿ ಬಸ್‌ಗಳಲ್ಲಿ ಕಿಕ್ಕಿರಿದು ಪ್ರಯಾಣಿಕರಿರುವುದರಿಂದ ಹಿರಿಯ ನಾಗರಿಕರು ಬಸ್‌ಗಳಲ್ಲಿ ನಿಂತೇ ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ. ಹಿರಿಯ ನಾಗರಿಕರಿಗೆಂದು ಬಸ್‌ಗಳಲ್ಲಿ ಸೀಟು ಮೀಸಲಿಡಲಾಗಿದೆ. ಆದರೆ ಬಹುತೇಕ ಬಸ್‌ಗಳಲ್ಲಿ ಇದರ ಪಾಲನೆಯಾಗುತ್ತಿಲ್ಲ. ಹಿರಿಯ ನಾಗರಿಕರು ನಿಂತಿದ್ದರೂ ಈ ಸೀಟುಗಳಲ್ಲಿ ಬೇರೊಬ್ಬರು ಕುಳಿತಿರುತ್ತಾರೆ. ಈ ಬಗ್ಗೆ ನಿರ್ವಾಹಕರು ಕೂಡ ಮಾತನಾಡುವುದಿಲ್ಲ. ಕೆಲವೊಂದು ಬಾರಿ ತನ್ನ ಸ್ವಾಭಿಮಾನ ಬಿಟ್ಟು ಹಿರಿಯ ನಾಗರಿಕರು ಸೀಟು ಕೇಳಿದರೂ, ಯುವಕ-ಯುವತಿಯರು ಮಾತ್ರ ಸೀಟು ಬಿಟ್ಟುಕೊಡಲು ಒಪ್ಪುತ್ತಿಲ್ಲ.

ಬಸ್‌ ನಿಲ್ದಾಣದಲ್ಲೂ ಕುಳಿತುಕೊಳ್ಳ ವ್ಯವಸ್ಥೆಯಿಲ್ಲ
ಚಿಲಿಂಬಿಯ ಶ್ರೀನಿವಾಸ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ಸ್ಟೇಟ್‌ಬ್ಯಾಂಕ್‌ ಸಿಟಿ ಬಸ್‌ ನಿಲ್ದಾಣದಲ್ಲಿ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಸಮರ್ಪಕ ವ್ಯವಸ್ಥೆ ಇಲ್ಲ. ಅಲ್ಲದೆ, ಬಸ್‌ಗಳಲ್ಲಿಯೂ ಹಿರಿಯ ನಾಗರಿಕರಿಗೆ ಮೀಸಲಿಟ್ಟ ಸೀಟುಗಳಲ್ಲಿ ಯುವಕರು -ಯುವತಿಯರು ಕುಳಿತುಕೊಳ್ಳುತ್ತಾರೆ’ ಎನ್ನುತ್ತಾರೆ.

ಎತ್ತರದ ಫುಟ್‌ಬೋರ್ಡ್‌
ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿನ ಫುಟ್‌ಬೋರ್ಡ್‌ ಕನಿಷ್ಠ 52 ಸೆಂ.ಮೀ.
ಎತ್ತರವಿರಬೇಕು ಎಂಬ ಕಾನೂನು ಇದೆ. ಆದರೆ ಕೆಲವು ಸಿಟಿ ಬಸ್‌ಗಳು ಇದರ ಪಾಲನೆಯಾಗುತ್ತಿಲ್ಲ. ಇದೇ ಕಾರಣಕ್ಕೆ ಬಸ್‌ಗಳ ಮೆಟ್ಟಿಲುಗಳನ್ನೇರಲು ಕೂಡ ಹಿರಿಯರು ಕಷ್ಟಪಡುತ್ತಿದ್ದಾರೆ.

Advertisement

ಟೇಪ್‌ರೆಕಾರ್ಡರ್‌ಕಿರಿ ಕಿರಿ
ಬಸ್‌ಗಳಲ್ಲಿ ಧ್ವನಿವರ್ಧಕ ಬಳಕೆ ಮಾಡಬಾರದು ಎಂಬ ನಿಯಮ ಇದೆ. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ ಬಸ್‌ಗಳಿಗೆ ಫಿಟ್‌ನೆಸ್‌ ಪ್ರಮಾಣಪತ್ರ ಲಭಿಸುವುದಿಲ್ಲ ನಗರದಲ್ಲಿ ಓಡಾಡುವ ಅನೇಕ ಬಸ್‌ಗಳಲ್ಲಿ ಅನಧಿಕೃತವಾಗಿ ಟೇಪ್‌ರೆಕಾರ್ಡರ್‌ ಅಳವಡಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಈಗಾಗಲೇ ಸಾರಿಗೆ ಇಲಾಖೆಗೆ ದೂರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ.

 ಬೆಂಬಲವಿಲ್ಲ
ಹಿರಿಯ ನಾಗರಿಕರ ಆಸನಗಳು ಅವರಿಗೇ ಮೀಸಲಿರಬೇಕು. ಈ ಬಗ್ಗೆ ನಿರ್ವಾಹಕರು ನೋಡಿಕೊಳ್ಳಬೇಕು. ಈ ವಿಚಾರ ಅವರ ಗಮನಕ್ಕೆ ತರಲಾಗುವುದು. ಬಸ್‌ಗಳಲ್ಲಿ ಟೇಪ್‌ರೆಕಾರ್ಡ್‌ ಅಳವಡಿಸುವ ವಿಷಯ ಗಮನಕ್ಕೆ ಬಂದಿದೆ. ಇದಕ್ಕೆ ನಮ್ಮ ಬೆಂಬಲವಿಲ್ಲ.
 - ದಿಲ್‌ರಾಜ್‌ ಆಳ್ವ, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

 ದಂಡ ವಿಧಿಸುತ್ತೇವೆ
ಹಿರಿಯ ನಾಗರಿಕರಿಗೆಂದು ಮೀಸಲಿಟ್ಟ ಆಸನಗಳನ್ನು ಅವರಿಗೇ ನಿಗದಿಪಡಿಸಬೇಕು. ಇದನ್ನು ನೋಡಿಕೊಳ್ಳುವುದು ಬಸ್‌ ನಿರ್ವಾಹಕನ ಜವಾಬ್ದಾರಿ. ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ ಎಂಬ ದೂರು ಬಂದಿದೆ. ಬಸ್‌ ಮಾಲಕರು ಬಸ್‌ ಫಿಟ್‌ನೆಸ್‌ ಪರೀಕ್ಷೆಯ ವೇಳೆ ಟೇಪ್‌ರೆಕಾರ್ಡ್‌ ತೆಗೆದು, ಬಾಕಿ ವೇಳೆ ಉಪಯೋಗಿಸುತ್ತಿರುವ ಬಗ್ಗೆಯೂ ದೂರು ಇದೆ. ಈ ಬಗ್ಗೆ ಸದ್ಯದಲ್ಲಿಯೇ ಕಾರ್ಯಾಚರಣೆ ನಡೆಸಿ ದಂಡ ವಿಧಿಸುತ್ತೇವೆ.
 - ಚಂದ್ರ ಉಪ್ಪಾರ, ಆರ್‌ಟಿಒ ಮಂಗಳೂರು

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next