Advertisement

ಕುಂದಾಣ ಬೆಟ್ಟ ಪ್ರವಾಸಿ ತಾಣವನ್ನಾಗಿಸಲು ಚಿಂತನೆ

05:36 PM Jun 16, 2022 | Team Udayavani |

ದೇವನಹಳ್ಳಿ: ಕುಂದಾಣ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಜಿಪಂ ಚಿಂತನೆ ನಡೆಸಿದ್ದು, ಐತಿಹಾಸಿಕ ಬೆಟ್ಟವನ್ನು ಅಭಿವೃದ್ಧಿಗೊಳಿಸಲು ಶೀಘ್ರವೇ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಜಿಪಂ ಸಿಇಒ ರೇವಣಪ್ಪ ತಿಳಿಸಿದರು.

Advertisement

ತಾಲೂಕಿನ ಕುಂದಾಣ ಐತಿಹಾಸಿಕ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಅವರು, ಕುಂದಾಣ ಬೆಟ್ಟದ ತುತ್ತತುದಿಯಲ್ಲಿ ಚನ್ನಕೇಶವ ದೇವಾಲಯ, ಶ್ರೀ ಆಂಜನೇಯಸ್ವಾಮಿ ದೇವಾಲಯ ಮತ್ತು ನೀರಿನ ದೋಣಿ ಕಾಣ ಸಿಗುತ್ತದೆ.

ಶತಮಾನಗಳ ಇತಿಹಾಸ ಅಡಗಿಸಿಟ್ಟಿಕೊಂಡಿರುವ ಈ ಬೆಟ್ಟವು ಪ್ರವಾಸಿಗರಿಗೆ ಸೆಳೆಯುತ್ತಿದೆ. ಮಳೆಗಾಲ ದಲ್ಲಂತೂ ಇದರ ಸೌಂದರ್ಯ ಮತ್ತಷ್ಟು ಮೆರಗುಗೊಳಿಸುತ್ತದೆ. ಎತ್ತ ನೋಡಿದರೂ ಹಸಿರು ರಾಶಿಯನ್ನು ಹೊದ್ದು ಮಲಗಿರುವ ಬೆಟ್ಟವನ್ನು ಕಾಣಬಹುದು. ಬೆಟ್ಟದ ಮೇಲ್ಭಾಗದಲ್ಲಿ ಚಾರಣಿಗರನ್ನು ಕೈಬೀಸಿ ಕರೆಯುವ ಪ್ರಕೃತಿ ವಿಸ್ಮಯ ಈ ಬೆಟ್ಟದಲ್ಲಿದೆ ಎಂದರು.

ದೇವಾಲಯ ಪುನರ್‌ ಪ್ರತಿಷ್ಠಾಪನೆ: ಈ ಬೆಟ್ಟವನ್ನು ಅಭಿವೃದ್ಧಿಗೊಳಿಸಲು ಹಲವಾರು ಚಿಂತನೆ ಮಾಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು ಕುಂದಾಣ ಬೆಟ್ಟವನ್ನು ಅಭಿವೃದ್ಧಿಪಡಿಸಲು ಸೂಚನೆ ನೀಡುತ್ತೇನೆ. ಮುಜರಾಯಿ ಇಲಾಖೆಗೆ ಸೇರಿರುವ ಚನ್ನಕೇಶವಸ್ವಾಮಿ ದೇವಾಲಯ ಪುನರ್‌ ಪ್ರತಿಷ್ಠಾಪನೆ ಮಾಡಲು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು. ತುಮಕೂರಿನಲ್ಲಿ ಶಿಲಾ ಕಟ್ಟಡಗಳ ವಿನ್ಯಾಸದಾರರು ಇದ್ದಾರೆ. ಅವರನ್ನು ಕರೆಸಿ ಯಾವ ರೀತಿ ದೇವಾಲಯವನ್ನು ಪುನರ್‌ ಸ್ಥಾಪಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯುತ್ತೇನೆ ಎಂದರು.

ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ: ಕುಂದಾಣ ಗ್ರಾಪಂನಿಂದ ಜಲಮಿಷನ್‌ ಯೋಜನೆಯಡಿಯಲ್ಲಿ ಬೆಟ್ಟಕ್ಕೆ ಪೈಪ್‌ಲೈನ್‌ ಮಾಡಲು ಹಾಗೂ ನರೇಗಾ ಯೋಜನೆಯಡಿಯಲ್ಲಿ ಸಂಜೀವಿನಿ ಶೆಡ್‌ ನಿರ್ಮಾಣ ಮಾಡಿ ನಾಲ್ಕು ಶೆಡ್‌ಗಳಲ್ಲಿ ತೆಂಗಿನಕಾಯಿ, ಪೂಜಾ ಸಾಮಗ್ರಿ, ಹೂವು ಮಾರಾಟ ಹಾಗೂ ಕಾಪಿ, ಟೀ ಅಂಗಡಿ ಒಳಗೊಂಡಂತೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಆಗಬೇಕು. ಹೆಚ್ಚಿನ ಜನರು ಬರುವಂತೆ ಮಾಡಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಪ್ರವೇಶ ಶುಲ್ಕವನ್ನು ಹಾಕಬೇಕು.

Advertisement

ದೇವಾಲಯಕ್ಕೆ ಹತ್ತುವ ಮೆಟ್ಟಿಲುಗಳಿಗೆ ಗ್ರಿಲ್ಸ್‌ ಅಳವಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಬೇಕು ಎಂದರು. ಅಭಿವೃದ್ಧಿಗೆ ಸಲಹೆ: ಗ್ರಾಪಂ ಅಧ್ಯಕ್ಷ ನಾರಾಯ ಣಸ್ವಾಮಿ ಮಾತನಾಡಿ, ಕುಂದಾಣ ಬೆಟ್ಟಕ್ಕೆ ಸಾಕಷ್ಟು ಇತಿಹಾಸವಿದೆ. ಈ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಮತ್ತಷ್ಟು ಅಭಿವೃದ್ಧಿ ಆಗುತ್ತದೆ. ಜಿಪಂ ಸಿಇಒ ಈ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಸಲಹೆ ನೀಡಿದ್ದಾರೆ. ಕ್ರಿಯಾಯೋಜನೆಗಳನ್ನು ತಯಾರಿಸಿ ಜಿಪಂಗೆ ಕಳುಹಿಸಿ ಅಭಿವೃದ್ಧಿಗೊಳಿ ಸಲಾಗುವುದು ಎಂದರು. ಜಿಪಂ ಉಪಕಾರ್ಯದರ್ಶಿ ಮುನಿಕೃಷ್ಣಪ್ಪ, ಮುಖ್ಯ ಯೋಜನಾಧಿಕಾರಿ ನರಸಿಂಹ, ಪಿಡಿಒ ಶಶಿಧರ್‌, ತಾಪಂ ಕಚೇರಿ ಪ್ರಕಾಶ್‌, ಮುಖಂಡ ನವೀನ್‌ ಹಾಗೂ ಮತ್ತಿತರರು ಇದ್ದರು.

ಕ್ರಿಯಾಯೋಜನೆ ರೂಪಿಸಲು ಜಿಪಂ ಸಿಇಒ ಸೂಚನೆ
ಜಿಪಂ ಉಪವಿಭಾಗದ ಎಂಜಿನಿಯರ್‌ ವಿಭಾಗಕ್ಕೆ ಬೆಟ್ಟದ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ. ಗ್ರಾಪಂನಿಂದಾಗುವ ಎಲ್ಲಾ ಕೆಲಸಗಳನ್ನು ಮಾಡಲು ಅನುಮತಿಯನ್ನು ನೀಡುತ್ತೇನೆ. ಕ್ರಿಯಾಯೋಜನೆ ಮಾಡಿ ಕಳುಹಿಸಿ ಕೊಡಿ. ಈ ಬೆಟ್ಟವು ಚಾರಣಿಯರ ಬೆಟ್ಟವಾಗಿದೆ. ಈ ಬೆಟ್ಟವು ಹೊಯ್ಸಳರ ಕಾಲದಲ್ಲಿ ಚನ್ನಕೇಶವಸ್ವಾಮಿ ದೇವಾಲಯ ನಿರ್ಮಾಣವಾಗಿರುವುದು ಕಂಡು ಬರುತ್ತಿದೆ. ಹಳೆಬೀಡು, ಇತರೆ ಕಡೆಗಳಲ್ಲಿ ಚನ್ನಕೇಶವ ಸ್ವಾಮಿಯನ್ನು ನೋಡುತ್ತೇವೆ ಎಂದು ಜಿಪಂ ಸಿಇಒ ರೇವಣಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next