ಉಡುಪಿ: ಸಾಹಿತಿ, ಪತ್ರಕರ್ತ ಪಾವೆಂ ಆಚಾರ್ಯರ ಸಮಗ್ರ ಸಾಹಿತ್ಯ, ಲೇಖನಗಳನ್ನು ಅಂತರ್ಜಾಲದಲ್ಲಿ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಅವರ ಅಪ್ರಕಟಿತ ಲೇಖನಮಾಲೆಗಳನ್ನೂ ಪುಸ್ತಕ ರೂಪದಲ್ಲಿ ಹೊರತರುವ ಚಿಂತನೆ ಇದೆ.
ರಥಬೀದಿ ಗೆಳೆಯರು ಶನಿವಾರ ಉಡುಪಿಯಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಪಾವೆಂ ಪುತ್ರ, ನಿವೃತ್ತ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪಾವೆಂ ಕೃತಿಗಳ ಸಂಗ್ರಹದಲ್ಲಿ ತೊಡಗಿಕೊಂಡಿರುವ ಮೊಮ್ಮಗಳು ಛಾಯಾ ಉಪಾಧ್ಯಾಯ ಸಂವಾದ ನಡೆಸಿ ಈ ಮಾಹಿತಿ ಹೊರಗೆಡಹಿದರು.
ಪಾವೆಂ ಅವರ ಕೃತಿ, ಲೇಖನಗಳು ಧಾರವಾಡ, ಬೆಂಗಳೂರು, ಉಡುಪಿ ಸಹಿತ ಕರ್ನಾಟಕದ ವಿವಿಧೆಡೆ ಇನ್ನೂ ಸುರಕ್ಷಿತವಾಗಿವೆ. ಆದರೆ ಇವುಗಳನ್ನು ಸಂಪಾದಿಸಲು ಸಾಕಷ್ಟು ಪರಿಶ್ರಮ ನಡೆಸಬೇಕಾಗಿದೆ. ಪಾವೆಂ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. “ಕಸ್ತೂರಿ’ಯಲ್ಲದೆ “ತರಂಗ’, “ತುಷಾರ’, “ಸುಧಾ’ ಮೊದಲಾದ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನಗಳು ಸಿಗುತ್ತಿವೆ ಎಂದು ಛಾಯಾ ಉಪಾಧ್ಯಾಯರು ಹೇಳಿದರು.
ಹುಬ್ಬಳ್ಳಿಯಲ್ಲಿ “ಕಸ್ತೂರಿ’ ಪತ್ರಿಕೆಯಲ್ಲಿರುವಾಗ ತಮ್ಮ ಮನೆಯಲ್ಲಿ ಕುರ್ಚಿಯೂ ಇದ್ದಿರಲಿಲ್ಲ. ಪಾವೆಂ ನೆಲದ ಮೇಲೆಯೇ ಕುಳಿತು ಬರೆಯುತ್ತಿದ್ದರು. ಮುಂದಿನ ಮೂರು ತಿಂಗಳಿಗೆ ಆಗುವಷ್ಟು ಲೇಖನಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಆಗಲೇ ಆಂಗ್ಲ ನಿಯತಕಾಲಿಕೆಗಳನ್ನು ತರಿಸಿಕೊಂಡು ಅಧ್ಯಯನ ನಡೆಸುತ್ತಿದ್ದರು. ಛಾಯಾ ಅವರ ಆಸಕ್ತಿಯನ್ನು ಗಮನಿಸುವಾಗ ಕುಟುಂಬದ ಸದಸ್ಯರು ಸೇರಿ ಪಾವೆಂ ಅವರ ಕೆಲಸಗಳನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡಬೇಕೆಂದೆನಿಸುತ್ತಿದೆ ಎಂದು ರಾಧಾಕೃಷ್ಣ ಆಚಾರ್ಯ ತಿಳಿಸಿದರು.
ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ| ಮುರಳೀಧರ ಉಪಾಧ್ಯಾಯ ಹಿರಿಯಡಕ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ಕಾರ್ಯಕ್ರಮ ನಿರ್ವಹಿಸಿ ಜಿ.ಪಿ. ಪ್ರಭಾಕರ ವಂದಿಸಿದರು.