ಯಾದಗಿರಿ: ಗಿರಿನಾಡು ಎಂದೇ ಖ್ಯಾತಿ ಯಾದ ಯಾದಗಿರಿ ಜಿಲ್ಲೆಯಾಗಿ 12 ವರ್ಷ ಕಳೆದಿದೆ. ಇಲ್ಲಿ ಅಖೀಲ ಭಾರತ ಸಮ್ಮೇಳನ ನಡೆಸಲು ಚಿಂತನೆ ನಡೆಸಿದ್ದು, ಹೀಗಾಗಿ ಪರಿಷತ್ತಿನ ಪದಾಧಿ ಕಾರಿಗಳು ಹಾಗೂ ಸಾಹಿತ್ಯಾಸಕ್ತರು ಇಂದಿನಿಂದಲೇ ಸಿದ್ಧತೆ ಆರಂಭಿಸಿಕೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ತಿಳಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಕಸಾಪ ನೂತನ ಅಧ್ಯಕ್ಷರ ಸೇವಾ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಜನರು ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ. ಕನ್ನಡ ಭಾಷೆಯಲ್ಲ, ಅದು ಸಂಸ್ಕೃತಿ. 2 ಸಾವಿರ ವರ್ಷದ ಇತಿಹಾಸವಿರುವ ನಮ್ಮ ಭಾಷೆಗೆ ಎಂದಿಗೂ ಚಿಂತಾಜನಕ ಸ್ಥಿತಿ ಬರಲು ಸಾಧ್ಯವಿಲ್ಲ ಎಂದರು. ಕನ್ನಡ ಅನ್ನ ನೀಡುವ ಭಾಷೆಯಾಗಬೇಕು. ನಾನು ಚಂದನ ವಾಹಿನಿ ಜನರ ಸಮೀಪಕ್ಕೆ ತಂದವನು. ಅದರಂತೆ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಮಧ್ಯೆ ತರುವ ತವಕ ಹೊಂದಿದ್ದೇನೆ. ಈ ಬಾರಿಯ ಪರಿಷತ್ತಿನ ಚುನಾವಣೆ ಐತಿಹಾಸಿಕವಾಗಿದೆ.
ನನ್ನನ್ನೂ ಸೇರಿ 21 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಮತದಾರರು ನನಗೆ ದಾಖಲೆ ಜಯ ನೀಡಿದ್ದಾರೆ. ನಿಮ್ಮ ವಿಶ್ವಾಸ ಎಂದಿಗೂ ಮರೆಯಲಾರೆ ಎಂದರು. ನಾಡಿನ ನೆಲ-ಜಲ, ಭಾಷೆಯ ವಿಷಯದಲ್ಲಿ ಸರ್ಕಾರ ಮೃದು ಧೋರಣೆ ಅನುಸರಿಸಿದ್ದಲ್ಲಿ ಪರಿಷತ್ತು ಬೀದಿಗಿಳಿದು ಹೋರಾಟ ಮಾಡಲಿದೆ. ಪರಿಷತ್ತಿಗೆ 1 ಕೋಟಿ ಸದಸ್ಯತ್ವ ಮಾಡಿಸುವ ಹೆಬ್ಬಯಕೆ ಹೊಂದಿದ್ದು, ನೋಂದಣಿ ಪ್ರಕ್ರಿಯೆಗೆ ತಂತ್ರಜ್ಞಾನ ಬಳಸಿಕೊಳ್ಳಲಾಗುವುದು ಆಪ್ ಮೂಲಕ ಸದಸ್ಯತ್ವ ಮಾಡಿಕೊಳ್ಳಲಾಗುವುದು. ಅಲ್ಲದೆ ಖರ್ಚು ರಹಿತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮುಂದೆ ಒಟಿಪಿ ಮೂಲಕವೇ ಮತದಾನ ಮಾಡುವ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಎಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಕನ್ನಡ ತೇರನ್ನೆಳೆಯುವ ಕೆಲಸ ಮಾಡುವೆ. ಕಳೆದ 8 ವರ್ಷ ನಾನು ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ್ದೇನೆ. ಹೀಗಾಗಿ ಸದಸ್ಯರು ನನಗೆ ಮತ್ತೂಮ್ಮೆ ಜವಾಬ್ದಾರಿ ನೀಡಿದ್ದಾರೆ. ಎಂದರು. ಈ ವೇಳೆ ಹೆಡಗಿಮದ್ರಾದ ಶ್ರೀಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಗುರು ಮರುಘಾರಾಜೇಂದ್ರ ಸ್ವಾಮಿಗಳು,
ಕೊಟ್ರೇಶ ಮರಬನಳ್ಳಿ ಇದ್ದರು. ಪ್ರಕಾಶ ಅಂಗಡಿ ಸ್ವಾಗತಿಸಿದರು. ಡಾ| ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು. ಬಸವರಾಜ ಮೋಟ್ನಳ್ಳಿ ವಂದಿಸಿದರು.
ವೈಜ್ಞಾನಿಕ ತಳಹದಿ ಮೇಲೆ ಕೆಲಸ ಮಾಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಪರಿಷತ್ತಾಗಿ ಮಾಡಿ ಕನ್ನಡದ ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತೇನೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ. ಯಾದಗಿರಿ ಜಿಲ್ಲೆಯಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದರ ಬಗ್ಗೆ ಸಾಹಿತ್ಯಾಸಕ್ತರು, ಕಸಾಪ ಪದಾಧಿಕಾರಿಗಳ ಜೊತೆ ಸೇರಿ ಮಾದರಿ ಸಮ್ಮೇಳನ ಮಾಡಿ ತೋರಿಸುತ್ತೇವೆ.
ನಾಡೋಜ ಡಾ| ಮಹೇಶ ಜೋಶಿ, ಕೇಂದ್ರ ಕಸಾಪ ರಾಜ್ಯಾಧ್ಯಕ್ಷರು
ಕೇಂದ್ರ ಸಾಹಿತ್ಯ ಪರಿಷತ್ತು ಮತ್ತು ಯಾದಗಿರಿ ಜಿಲ್ಲಾಧ್ಯಕ್ಷರು ಅಧಿಕಾರ ಸ್ವೀಕರಿಸಿ ಕನ್ನಡ ಕಟ್ಟುವ ಕಾಯಕಕ್ಕೆ ನಿಂತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಮಠ ಸದಾ ಭಕ್ತರು ಮತ್ತು ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹಿಸುತ್ತಿದ್ದು, ಈ ಕೆಲಸಕ್ಕೆ ನಮ್ಮಿಂದಾಗುವ ಸಹಾಯ, ಸಹಕಾರ ಮಠದಿಂದ ನೀಡುತ್ತೇವೆ.
ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮಿಗಳು, ಹೆಡಗಿಮದ್ರಾ