Advertisement

ಇಥೆನಾಲ್ ಉತ್ಪಾದನಾ ಘಟಕ ಸ್ಥಾಪನೆಗೆ ಚಿಂತನೆ: ಸಚಿನ್‌

03:22 PM Jul 07, 2019 | Team Udayavani |

ಗದಗ: ಇತ್ತೀಚಿನ ವರ್ಷಗಳಲ್ಲಿ ಇಂಧನಕ್ಕೆ ಭಾರೀ ಬೇಡಿಕೆಯಿದ್ದು, ಅದಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಚ್ಛಾ ತೈಲದೊಂದಿಗೆ ಶೇ.10 ರಷ್ಟು ಇಥೆನಾಲ್ ಬೆಸರಲು ಭಾರತ ಸರಕಾರವೇ ಅವಕಾಶ ಕಲ್ಪಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಸುಮಾರು 150 ಜನರಿಗೆ ಉದ್ಯೋಗ ಕಲ್ಪಿಸುವಂತಹ ಕೃಷಿ ತ್ಯಾಜ್ಯ ಆಧಾರಿತ ಇಥೆನಾಲ್ ಉತ್ಪಾದನಾ ಘಟಕ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಯುವ ಮುಖಂಡ ಸಚಿನ್‌ ಡಿ. ಪಾಟೀಲ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸುವಂತಹ ಉದ್ಯಮಗಳ ಸ್ಥಾಪಿಸುವ ಪ್ರಯತ್ನ ನಡೆಸಿದ್ದು, ತಮ್ಮ ಆತ್ಮೀಯರಾಗಿರುವ ಬೆಂಗಳೂರು ಮೂಲದ ಸುಮಂತ್‌ ಅವರು ಗದಗ ಹಾಗೂ ಗಂಗಾವತಿ ಭಾಗದಲ್ಲಿ ಕೃಷಿ ತ್ಯಾಜ್ಯ ಆಧಾರಿತ ಇಥೆನಾಲ್ ಉತ್ಪಾದನಾ ಘಕಟಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪಿಸಲಿದ್ದಾರೆ. ಅದಕ್ಕೆ ಅಗತ್ಯವಿರುವ 5 ಎಕರೆ ಜಮೀನುನ್ನು ಜಿಲ್ಲಾಡಳಿತ ಕನಿಷ್ಠ 99 ವರ್ಷಗಳ ಅವಧಿಗೆ ಲೀಸ್‌ ನೀಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಮೂಲದ ಉದ್ಯಮಿ ನವೀನ್‌ ಮಾತನಾಡಿ, ದೇಶದಲ್ಲಿ ಸದ್ಯ ಸಕ್ಕರೆ ಕಾರ್ಖಾನೆಗಳ ತ್ಯಾಜ್ಯದಿಂದ ಇಥೆನಾಲ್ ತಯಾರಿಸಿ, ಅದನ್ನು ಕಚ್ಛಾ ತೈಲಗಳಲ್ಲಿ ಬೆರೆಸಲಾಗುತ್ತದೆ. ಆದರೆ ಸಕ್ಕರೆ ಕಾರ್ಖಾನೆಗಳಿಂದ ಬೇಡಿಕೆ ಈಡೇರಿಸಲಾಗುತ್ತಿಲ್ಲ. ಈ ಭಾಗದಲ್ಲಿ ಯಥೇಚ್ಛವಾಗಿ ದೊರೆಯುವ ಮೆಕ್ಕೆಜೋಳ ದ ಸಿಪ್ಪೆ ಹಾಗೂ ಮತ್ತಿತರೆ ಕೃಷಿ ತ್ಯಾಜ್ಯಗಳಿಂದ ಇಥೇನಾಲ್ ಉತ್ಪಾದಿಸಬಹುದಾಗಿದೆ. ಒಟ್ಟು 240 ಕೆಎಲ್ಪಿ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲು ಉದ್ದೇಶಿ ಸಲಾಗಿದೆ. ಅದರ ಭಾಗವಾಗಿ ಗದಗಿನಲ್ಲಿ ಸುಮಾರು 20 ಸಾವಿರ ಲೀಟರ್‌ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದಕ್ಕೆ ಅಗತ್ಯವಿರುವ ಜಮೀನು ಒದಗಿಸಿದರೆ, ಶೀಘ್ರವೇ ಘಟಕ ಸ್ಥಾಪನೆಯಾಗಲಿದೆ. ಈ ಕುರಿತು ಇಂದೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಮತ್ತೋರ್ವ ಉದ್ಯಮಿ ಮಕ್ರಂದ್‌ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರದ 24×7 ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅದಕ್ಕೆ ಉತ್ಕೃಷ್ಠ ಗುಣಮಟ್ಟದ ಮೀಟರ್‌ಗಳನ್ನು ಪೂರೈಸಲು ಸಿದ್ಧರಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ಅವರು, ಪ್ರಧಾನಿ ಮೋದಿ ಅವರ ಮೇಕಿನ್‌ ಇಂಡಿಯಾ ಆಶಯದಂತೆ ತಾವು ಸ್ಥಳೀಯವಾಗಿಯೇ ಮೀಟರ್‌ಗಳನ್ನು ಉತ್ಪಾದಿಸುತ್ತಿರುವುದಾಗಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿ¿ಲ್ಲಿ ಉದ್ಯಮಿ ಸುಮಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next