Advertisement

ಒಂದೇ ಸೂರಿನಡಿ ಜುವೆಲರಿ ಸೇವೆ: ರಾಜ್ಯದಲ್ಲಿ ಜುವೆಲರಿ ಪಾರ್ಕ್‌ ನಿರ್ಮಾಣಕ್ಕೆ ಚಿಂತನೆ

11:04 PM Sep 21, 2021 | Team Udayavani |

ಉಡುಪಿ: ದೇಶದಲ್ಲಿ ಮುಂಬಯಿಯಲ್ಲಿ ಮಾತ್ರ ಇರುವ ಜುವೆಲರಿ ಪಾರ್ಕ್‌ ಅನ್ನು ಕರ್ನಾಟಕ ದಲ್ಲೂ ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ. ಚಿನ್ನಾ ಭರಣ ತಯಾರಿ, ಪಾಲಿಶಿಂಗ್‌, ಮಾರಾಟ ಸಹಿತ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲವನ್ನು ಒಂದೇ ಸೂರಿನಡಿ ಕಲ್ಪಿಸುವುದು ಇದರ ಉದ್ದೇಶ.

Advertisement

ಪ್ರಸ್ತುತ ಕೇಂದ್ರ ಸರಕಾರವು ಜೆಮ್‌  ಆ್ಯಂಡ್‌ ಜುವೆಲರಿ ಎಕ್ಸ್‌ಪೋರ್ಟ್‌ ಕೌನ್ಸಿಲ್‌ ಮೂಲಕ ದೇಶದ 17 ಕಡೆ ತರಬೇತಿ ಹಾಗೂ ಪರವಾನಿಗೆ ನೀಡುತ್ತಿದೆ. ಈ ಕೇಂದ್ರ ರಾಜ್ಯದಲ್ಲಿ ಉಡುಪಿಯಲ್ಲಿ ಮಾತ್ರ ಇದ್ದು, 6 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು

300 ಮಂದಿ ತರಬೇತಿ ಪಡೆದುಕೊಂಡಿದ್ದಾರೆ. ವಿವಿಧ ವಿನ್ಯಾಸ, ಕಂಪ್ಯೂ ಟರ್‌ ಡಿಸೈನ್‌, ದೇಸೀ/ ಅಂತಾರಾಷ್ಟ್ರೀಯ ಜುವೆಲರಿ, ಪ್ರಾಚೀನ ಜುವೆಲರಿ, ಸ್ಥಳೀಯ ವಿನ್ಯಾಸಗಳ ಮಾಹಿತಿಯನ್ನು ನೀಡಲಾಗುತ್ತದೆ. ಇವಿಷ್ಟೇ ಅಲ್ಲದೆ ಈಗಾಗಲೇ ದೇಶದ 6 ಪ್ರಾಂತ್ಯಗಳ 20 ರಾಜ್ಯಗಳಲ್ಲಿ 192 ಕ್ಲಸ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, 90 ಸಾವಿರ ಯುನಿಟ್‌ಗಳಿವೆ.

ಬೆಂಗಳೂರಿನಲ್ಲಿ ನಿರ್ಮಾಣಕ್ಕೆ ಮನವಿ:

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಕಲಬುರಗಿ ಅಥವಾ ಬೀದರ್‌ನಲ್ಲಿ ಜುವೆಲರಿ ಪಾರ್ಕ್‌ ಸ್ಥಾಪಿಸುವ ಉದ್ದೇಶ ಸರಕಾರದ್ದು. ಆದರೆ ಜುವೆಲರಿ ಫೆಡರೇಶನ್‌ನವರು ಬೆಂಗಳೂರು ಹೊರವಲಯ ದಲ್ಲಿಯೇ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.

Advertisement

ಉಪಯೋಗ ಏನು?:

ಪ್ರಸ್ತುತ ಆಭರಣ ತಯಾರಿಯಲ್ಲಿ ಸಂಪ್ರದಾಯಿಕತೆಗೇ ಒತ್ತು. ಜುವೆಲರಿ ಪಾರ್ಕ್‌ ಮೂಲಕ ಅತ್ಯಾಧುನಿಕ ಉಪಕರಣಗಳ ಮೂಲಕ ತಯಾರಿಸುವ ಕಲೆಯನ್ನು ತಿಳಿಸಲಾಗುತ್ತದೆ.

ಚಿನ್ನ ಬರುವುದೆಲ್ಲಿಂದ?:

ಭಾರತಕ್ಕೆ ಕಚ್ಚಾ ಚಿನ್ನವು ಲಂಡನ್‌ ಮತ್ತು ದಕ್ಷಿಣ ಆಫ್ರಿಕಾದಿಂದ ಬರುತ್ತಿದೆ. ಹಿಂದೆ ಶೇ. 1ರಿಂದ 2ರಷ್ಟು ಆಮದು ಶುಲ್ಕವಿತ್ತು. ಈಗ ಶೇ. 12.5 ತೆರಿಗೆಯನ್ನು ಸರಕಾರ ವಿಧಿಸುತ್ತಿದೆ.

ಮರುಬಳಕೆಗೆ ಪ್ರೋತ್ಸಾಹ:

ರಾಜ್ಯವು ವಾರ್ಷಿಕ 950 ಟನ್‌ ಕಚ್ಚಾ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಸರಕಾರ ಈಗ ಹಳೆ ಚಿನ್ನದ ಮರುಬಳಕೆ(ರೀಸೈಕ್ಲಿಂಗ್‌)ಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ದೇಶದಲ್ಲಿ ಆಮದಿನ ಮೂರು ಪಟ್ಟು ಮರುಬಳಕೆ ನಡೆಯುತ್ತಿದೆ.

ಆಭರಣ ಪ್ರಿಯ ಭಾರತ:

ಚಿನ್ನಾಭರಣ ಬಳಕೆ ಹಾಗೂ ಖರೀದಿಯಲ್ಲಿ ವಿಶ್ವದಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ಕೇರಳಿಗರು ವರ್ಷಂಪ್ರತಿ ಚಿನ್ನಾಭರಣ ಬದಲಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಕಾರ್ಪೊರೆಟ್‌ ಜುವೆಲರಿಗಳೂ ಕೇರಳದಿಂದಲೇ ಹುಟ್ಟಿಕೊಂಡಿವೆ. ಉಳಿದಂತೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚಿನ ಮಂದಿ ಚಿನ್ನಾಭರಣ ಖರೀದಿಸುತ್ತಾರೆ.

ಜುವೆಲರಿ ಪಾರ್ಕ್‌ ಅನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ದೇಶ ಮತ್ತಷ್ಟು ಪ್ರಗತಿ ಸಾಧ್ಯವಾಗಲಿದೆ.– ಜಿ. ಜಯ ಆಚಾರ್ಯ, ಚೇರ್ಮನ್‌, ಕರ್ನಾಟಕ ಜುವೆಲರ್ಸ್‌ ಫೆಡರೇಶನ್‌

 

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next