Advertisement

ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ಗೆ ಚಿಂತನೆ; ‌ ಪ್ರವಾಸಿ ತಾಣಗಳ ದರ್ಶನ

04:12 PM Apr 08, 2022 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಒಂದು ದಿನ ಹಾಗೂ ಮೂರು ದಿನಗಳ ಪಾಸು ವ್ಯವಸ್ಥೆ ಜಾರಿಗೊಳಿಸಿದ ಬೆನ್ನಲ್ಲೇ ಈ ಮಾದರಿಯ ಪಾಸುಗಳಿಗೆ ಹೆಚ್ಚು ಜನರನ್ನು ಕರೆತರಲು ಹೊಸ ಪ್ರಯಾಣಿಕರ ವರ್ಗದ ಕಡೆಗೆ ನೋಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಏಜೆನ್ಸಿಗಳೊಂದಿಗೆ ಕೈಜೋಡಿಸಲು ಚಿಂತನೆ ನಡೆಸಿದೆ.

Advertisement

ಈ ಪ್ರಯತ್ನ ಯಶಸ್ವಿಯಾದರೆ, ನಗರಕ್ಕೆ ಬರುವ ಪ್ರವಾಸಿಗರು ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ ಹಾಕಬಹುದು. ಇದರಿಂದ ಸಮಯವೂ ಉಳಿತಾಯ ಆಗುತ್ತದೆ. ಜತೆಗೆ ಸಂಚಾರ ‌ದಟ್ಟಣೆ ಕಿರಿಕಿರಿಯೂ ಇರುವುದಿಲ್ಲ. ಖರ್ಚು ತುಸು ಕಡಿಮೆ ಆಗಲಿದೆ. ಈ ಎಲ್ಲ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಟ್ರಾವೆಲ್‌ ಏಜೆನ್ಸಿಗಳೊಂದಿಗೆ ಕೈಜೋಡಿಸುವ ಆಲೋಚನೆ ನಡೆಸಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಪ್ರಸ್ತುತ ನಿತ್ಯ ಸಾವಿರಾರು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಇದರಲ್ಲಿ ಬಹುತೇಕರು “ಪ್ಯಾಕೇಜ್‌ ಟೂರ್‌’ನಲ್ಲಿ ಬಂದು, ಇಲ್ಲಿನ ಪ್ರವಾಸಿ ತಾಣಗಳಿಗೆ ಟೂರಿಸ್ಟ್‌ ಬಸ್‌ಗಳಲ್ಲೇ ಭೇಟಿ ನೀಡುತ್ತಾರೆ. ಹೀಗೆ ಪ್ರವಾಸಿಗರನ್ನು ಕರೆತರುವ ಏಜೆನ್ಸಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು, ಮೆಟ್ರೋ ಮೂಲಕ ಪ್ರವಾಸಿ ತಾಣಗಳ ದರ್ಶನ ಮಾಡಿ ಸುವ ಐಡಿಯಾ ಇದೆ. ಇದರಿಂದ ಪ್ರವಾಸಿಗರಿಗೂ ಹೊಸ ಅನುಭವ ಸಿಗಲಿದೆ. ತನಗೆ ಆದಾಯವೂ ಬರಲಿದೆ ಎಂಬ ಲೆಕ್ಕಾಚಾರ ನಿಗಮದ್ದಾಗಿದೆ.

ಈ ಚಿಂತನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಒಂದೆರಡು ತಿಂಗಳಲ್ಲಿ ಇದಕ್ಕೊಂದು ರೂಪುರೇಷೆ ನೀಡಲಾಗುವುದು. ಒಂದು ವೇಳೆ ಮಾತುಕತೆ ಫ‌ಲಿಸಿದರೆ, ಟ್ರಾವೆಲ್‌ ಏಜೆನ್ಸಿಗಳು ಇದಕ್ಕೆ ಪೂರಕ ವಾಗಿ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರತ್ಯೇಕ ನಕ್ಷೆ ಹಾಕಿಕೊಳ್ಳಲಿವೆ. ಇನ್ನು “ನಮ್ಮ ಮೆಟ್ರೋ’ ಹಾದುಹೋಗುವ ಮಾರ್ಗದಲ್ಲೇ ವಿಧಾನಸೌಧ, ಲಾಲ್‌ಬಾಗ್‌, ಕಬ್ಬನ್‌ ಉದ್ಯಾನ, ಮಾರುಕಟ್ಟೆಗೆ ಸಮೀಪ ಇರುವ ಟಿಪ್ಪು ಬೇಸಿಗೆ ಅರಮನೆ, ಇಸ್ಕಾನ್‌ ಒಳಗೊಂಡಂತೆ
ಹಲವು ಪ್ರವಾಸಿ ತಾಣಗಳು ಬರುತ್ತವೆ. ಮಂತ್ರಿಸ್ಕ್ವೇರ್‌, ಒರಾಯನ್‌ ನಂತಹ ಮಾಲ್‌ಗ‌ಳಿಗೆ ಕೂಡ ಸಂಪರ್ಕ ಕಲ್ಪಿಸುವುದರಿಂದ ಶಾಪಿಂಗ್‌ ಗೂ ಅನುಕೂಲ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಪ್ರಯೋಗದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಎಷ್ಟು ಏರಿಕೆ ಆಗಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ, ಮುಂಬ ರುವ ದಿನಗಳಲ್ಲಿ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆ ಆಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇದು ಉತ್ತಮ ಫ‌ಲ ನೀಡಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

Advertisement

ಏಜೆನ್ಸಿಗಳಿಗೆ ಏನು ಲಾಭ?: ಟೂರಿಸ್ಟ್‌ ಟ್ರಾವೆಲ್‌ ಏಜೆನ್ಸಿಗಳಿಗೆ ಸಗಟು ದಿನದ ಪಾಸುಗಳನ್ನು ಖರೀದಿಸಿದರೆ ರಿಯಾಯ್ತಿ ನೀಡಲು ಅವಕಾಶ ಇದೆ. ಅಥವಾ ಇಂತಿಷ್ಟು ಪ್ರವಾಸಿಗರನ್ನು ಕರೆತಂದರೆ ರಿಯಾಯ್ತಿಗಳನ್ನು ನೀಡಬಹುದು. ಆದರೆ, ಇದೆಲ್ಲವೂ ಮಾತುಕತೆ ಮತ್ತು ಅದಕ್ಕೆ ದೊರೆಯುವ ಸ್ಪಂದನೆಯನ್ನು ಅವಲಂಬಿಸಿದೆ.

ಇನ್ನೂ ಯಾವುದೇ ಚರ್ಚೆಗಳು ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಏಜೆನ್ಸಿಗಳೊಂದಿಗೆ ನಡೆದಿಲ್ಲ. ಈಗ ಪರಿಚಯಿಸಿರುವ ಒಂದು ದಿನದ ಮತ್ತು ಮೂರು ದಿನಗಳ ಪಾಸಿಗೆ ಪ್ರತಿಕ್ರಿಯೆ ನೋಡಿಕೊಂಡು ಮುಂದುವರಿಯಲು ಉದ್ದೇಶಿಸಲಾಗಿದೆ. ಈ ಮಧ್ಯೆ ಏಪ್ರಿಲ್‌ 2ರಿಂದ ಪರಿಚಯಿಸಲಾದ ದೈನಂದಿನ ಮೆಟ್ರೋ ಪಾಸುಗಳ ಮಾರಾಟ ಅಷ್ಟಕ್ಕಷ್ಟೇ ಇದೆ. ದಿನದ ಪಾಸಿಗೆ 150 ರೂ. ಇದ್ದರೆ, ಮೂರು ದಿನದ ಪಾಸಿಗೆ 350 ರೂ. ನಿಗದಿಪಡಿಸಲಾಗಿದೆ (50 ರೂ. ಠೇವಣಿ ಹೊರತುಪಡಿಸಿ). ನಿತ್ಯ ಅಬ್ಬಬ್ಟಾ ಎಂದರೆ 50 ಪಾಸುಗಳು ಮಾರಾಟ ಆಗುತ್ತಿವೆ. ಇದರಲ್ಲಿ ಒಂದು ದಿನದ ಪಾಸು 30ರಿಂದ 40 ಇದ್ದರೆ, ಉಳಿದವು ಮೂರು ದಿನಗಳ ಪಾಸು ಆಗಿವೆ. ಆದರೆ, ಈಗಲೇ ನಿರೀಕ್ಷಿತ ಸ್ಪಂದನೆ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಗದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಬಿಎಂಟಿಸಿ ಬೆಂಗಳೂರು ರೌಂಡ್ಸ್‌ಬಹುತೇಕ ಸ್ಥಗಿತ
ಬಿಎಂಟಿಸಿ ವತಿಯಿಂದ ಕೂಡ “ಬೆಂಗಳೂರು ರೌಂಡ್ಸ್‌’ ಇದ್ದು, ವೋಲ್ವೋ ಬಸ್‌ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 15ರಿಂದ 20 ತಾಣಗಳ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೋವಿಡ್‌ ಪರಿಣಾಮ ನೀರಸ ಸ್ಪಂದನೆ ದೊರಕಿದ್ದು, ಬಹುತೇಕ ಸ್ಥಗಿತಗೊಂಡಿದೆ

ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಟೂರಿಸ್ಟ್‌ ಟ್ರಾವೆಲ್‌ ಏಜೆನ್ಸಿಗಳ ಜತೆ ಕೈಜೋಡಿಸುವ ಆಲೋಚನೆ ಇದೆ. ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಪ್ರಯತ್ನದಿಂದ ಪ್ರವಾಸಿಗರಿಗೆ ಸಮಯ ಉಳಿತಾಯ, ನಗರದ ಪ್ರವಾಸಿ ತಾಣಗಳ ಪರಿಚಯ, ಏಜೆನ್ಸಿಗಳಿಗೂ ಅನುಕೂಲ ಆಗಲಿದೆ.
●ಅಂಜುಂ ಪರ್ವೇಜ್‌,
ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್

*ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next