ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ ಮತ್ತು ನ್ಯೂಝಿಲ್ಯಾಂಡ್ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳಿಂದ ಸೋಲುಂಡಿರಬಹುದು ಆದರೆ ಈ ಪಂದ್ಯದಲ್ಲಿ ಭಾರತದ ಓರ್ವ ಪ್ರತಿಭಾವಂತ ವೇಗಿ ತನ್ನ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಪುನರಾಗಮನವನ್ನು ಭರ್ಜರಿಯಾಗಿಯೇ ಮಾಡಿದ್ದಾರೆ.
ಅವರೇ ಭಾರತ ತಂಡದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ. ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಐದು ವಿಕೆಟ್ ಪಡೆದು ಮಿಂಚಿದ್ದರು. ಅವರ ಜೊತೆಗಾರ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮಹಮ್ಮದ್ ಶಮಿ ಕಿವೀಸ್ ವೇಗಿಗಳನ್ನು ಕಟ್ಟಿಹಾಕುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು.
ಇಶಾಂತ್ ಅವರ ಈ ಜಬರ್ದಸ್ತ್ ಕಮ್ ಬ್ಯಾಕ್ ಆಸೀಸ್ ಮಾಜೀ ವೇಗಿ ಲೆಜೆಂಡರಿ ಬೌಲರ್ ಗ್ಲೆನ್ ಮೆಕ್ ಗ್ರಾಥ್ ಅವರನ್ನು ಇಂಪ್ರೆಸ್ ಮಾಡಿದೆ. ಕಿವೀಸ್ ಅಂಗಳದಲ್ಲಿ ಇಶಾಂತ್ ಆಟ ನೋಡಿ ಮೆಕ್ ಗ್ರಾಥ್ ಅವರು ಇವರ ಆಟವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.
ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಬೌಲಿಂಗ್ ನೋಡಿದ ಮೆಕ್ ಗ್ರಾಥ್ ಅವರನ್ನು ಪ್ರಶಂಸಿಸುತ್ತಾ, ಇಶಾಂತ್ ಈ ಪಂದ್ಯದ ಮೂಲಕ ತಮ್ಮಲ್ಲಿದ್ದ ಬೌಲರ್ ಗೆ ಮರು ಹುಟ್ಟು ನೀಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ. ಆತ ಒಬ್ಬ ಅನುಭವಿ ಬೌಲರ್. ಕಳೆದ ಕೆಲವು ವರ್ಷಗಳಿಂದ ಆತ ಆಡುತ್ತಿರುವ ರೀತಿ ನೋಡಿದರೆ ತುಂಬಾ ಖುಷಿಯಾಗುತ್ತದೆ.
ಹಿಂದೊಮ್ಮೆ, ಈತನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಮುಗಿದೇ ಹೋಯಿತೆಂದು ಭಾವಿಸಿದ್ದೆ, ಆದರೆ ಇಶಾಂತ್ ತನ್ನನ್ನು ತಾನು ಮರುಸೃಷ್ಟಿಸಿಕೊಂಡತೆ ಆಟವಾಡುತ್ತಿದ್ದಾನೆ ಎಂದು ಒಂದು ಕಾಲದ ವಿಶ್ವಶ್ರೇಷ್ಠ ಬೌಲರ್ ಭಾರತೀಯ ವೇಗಿಯ ಬೌಲಿಂಗ್ ಪ್ರತಿಭೆಯನ್ನು ಕೊಂಡಾಡಿದ್ದಾರೆ.